ಮಡಿಕೇರಿ: ದಿಡ್ಡಳ್ಳಿ ಹೋರಾಟವನ್ನು ಸಹಿಸದ ಕೆಲವರು ತನ್ನ ಮೇಲೆ ದಾಳಿ ಯತ್ನ ಮಾಡುವ ಮೂಲಕ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖ ಜೆ.ಕೆ.ಅಪ್ಪಾಜಿ ಮುಂದಿನ ದಿನಗಳಲ್ಲಿ ತಮಗೆ ಅಪಾಯ ಸಂಭವಿಸಿದಲ್ಲಿ ಅದಕ್ಕೆ ಹೋರಾಟದ ವಿರುದ್ಧ ಹೇಳಿಕೆ ನೀಡುತ್ತಿರುವವರು ಹಾಗೂ ಅರಣ್ಯ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.13 ರಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷರಾದ ದೊರೆಸ್ವಾಮಿ ಅವರ ಆಗಮನದ ನಂತರ ದಿಡ್ಡಳ್ಳಿಯಲ್ಲೇ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.
ನಿರಾಶ್ರಿತರಿಗೆ ಕನಿಷ್ಠ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವಷ್ಟು ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ದಿಡ್ಡಳ್ಳಿ ಹೋರಾಟ ನಡೆಯುತ್ತಿದೆಯೇ ಹೊರತು ಏಕರೆಗಟ್ಟಲೆ ಭೂಮಿಗಾಗಿ ಒತ್ತಾಯಿಸುತ್ತಿಲ್ಲ. ಆದರೆ ಜಿಲ್ಲೆಯ ಪ್ರಭಾವಿ ಜನಾಂಗವೊಂದು ಗಿರಿಜನರ ಹೋರಾಟದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಸೃಷ್ಟಿಸುತ್ತಿದೆ. ಪ್ರಭಾವೀ ಜನಾಂಗದ ಮನೆಗಳಲ್ಲೇ ಕೊಡಗಿನ ಮೂಲ ನಿವಾಸಿಗಳಾದ ಆದಿವಾಸಿಗಳು ಅನಾದಿ ಕಾಲದಿಂದಲೂ ಕಾರ್ಮಿಕರಾಗಿ ದುಡಿಯುತ್ತಾ ಬರುತ್ತಿದ್ದಾರೆ. ಮೂಲನಿವಾಸಿ ಗಿರಿಜನರಿಗೆ ಜಿಲ್ಲೆಯಲ್ಲೇ ನಿವೇಶನ ಕಲ್ಪಿಸಲು ಅಡ್ಡಿ ಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಜೆ.ಕೆ.ಅಪ್ಪಾಜಿ, ದಿಡ್ಡಳ್ಳಿ ಪ್ರದೇಶ ಪೈಸಾರಿ ಎಂದು ದಾಖಲೆಗಳಿರುವುದಕ್ಕಾಗಿ ಇದೇ ಪ್ರದೇಶದಲ್ಲಿ ನಿವೇಶನ ಹಂಚಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಟಿಬೆಟ್ ನಿರಾಶ್ರಿತರಿಗೆ ಅರಣ್ಯ ಭಾಗದಲ್ಲಿ ಹಾಗೂ ತಮಿಳು ಕಾರ್ಮಿಕರಿಗೆ ಪೈಸಾರಿ ಜಾಗದಲ್ಲಿ ನಿವೇಶನಗಳನ್ನು ನೀಡಲಾಗಿದೆ. ಆದರೆ ಮೂಲನಿವಾಸಿಗಳಾದ ಆದಿವಾಸಿಗಳಿಗೆ ನಿವೇಶನ ನೀಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದಿಡ್ಡಳ್ಳಿಯಲ್ಲಿ ಕಾನೂನನ್ನು ಉಲ್ಲಂಘಿಸದೆ ಹೋರಾಟವನ್ನು ನಡೆಸುತ್ತಿದ್ದರೂ ಕೆಲವರು ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಇವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದೇ ಕಾರಣದಿಂದ ಫೆ.7 ರಂದು ಸಂಜೆ ಪಿರಿಯಾಪಟ್ಟಣದಿಂದ ತಾವು ಮರಳುತ್ತಿದ್ದ ಸಂದರ್ಭ ಕೆಲವರು ವಾಹನದಲ್ಲಿ ಹಿಂಬಾಲಿಸಿ ದಾಳಿ ನಡೆಸುವ ಯತ್ನ ಮಾಡಿದ್ದಾರೆ. ಭಯಗೊಂಡ ನಾವು ಚೆಕ್ ಪೋಸ್ಟ್ ಬಳಿ ಬಂದು ಕಾದು ಕುಳಿತರೂ ದಾಳಿ ಮಾಡಲು ಬಂದವರು ಸುಳಿಯಲಿಲ್ಲವೆಂದು ಜೆ.ಕೆ.ಅಪ್ಪಾಜಿ ಆರೋಪಿಸಿದರು.
ದಾಳಿ ಯತ್ನದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುಂದೆ ಅನಾಹುತಗಳು ಸಂಭವಿಸಿದಲ್ಲಿ ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವವರು ಹಾಗೂ ಅರಣ್ಯ ಇಲಾಖೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ದಿಡ್ಡಳ್ಳಿ ನಿರಾಶ್ರಿತರಿಗೆ ಇದೇ ಪ್ರದೇಶದಲ್ಲಿ ನಿವೇಶನ ನೀಡುವ ಭರವಸೆ ನೀಡಿದ್ದರಲ್ಲದೆ, ವಿಶೇಷ ಸಭೆ ನಡೆಸುವ ಕುರಿತು ಪ್ರಸ್ತಾಪಿಸಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆಯದ ಕಾರಣ ಫೆ.13 ರಿಂದ ಹೋರಾಟವನ್ನು ತೀವ್ರಗೊಳಿಸುತ್ತಿರುವುದಾಗಿ ಅಪ್ಪಾಜಿ ಹೇಳಿದರು.
ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಮಾತನಾಡಿ ದಿಡ್ಡಳ್ಳಿಯಲ್ಲಿರುವುದು ಪೈಸಾರಿ ಜಾಗ ಎನ್ನುವ ಕಾರಣಕ್ಕಾಗಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಬೇರೆಡೆ ನಿವೇಶನ ಗುರುತಿಸಿದರೆ ಹೋಗಲು ಯಾರಿಲ್ಲವೆಂದು ಸ್ಪಷ್ಟಪಡಿಸಿದರು. ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದ ಅವರು ಜಿಲ್ಲೆಯಲ್ಲಿರುವ ಎಲ್ಲಾ ಗಿರಿಜನ ಕುಟುಂಬವನ್ನು ಜೀತ ಮುಕ್ತಗೊಳಿಸುವುದೇ ಹೋರಾಟದ ಗುರಿ ಎಂದರು.
ಗಿರಿಜನ ಮುಖಂಡ ಜೆ.ಕೆ.ಸ್ವಾಮಿ ಮಾತನಾಡಿ ನಿರಾಶ್ರಿತರಿಗೆ ಕನಿಷ್ಠ ಎರಡು ಎಕರೆ ಜಾಗ ಒದಗಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೈ.ಕೆ.ಮಲ್ಲ ಉಪಸ್ಥಿತರಿದ್ದರು.