ಕಾಸರಗೋಡು: ಮೀನು ಹಾಳಾಗದ ರೀತಿಯಲ್ಲಿ ಕೆಲ ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡುತ್ತಿದ್ದು, ರಾಸಾಯನಿಕ ವಸ್ತುಗಳ ಮಿಶ್ರಣ ಸಿಂಪಡಿಸಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಆಪರೇಶನ್ ಸಾಗರ್ ರಾಣಿ ಎಂಬ ಹೆಸರಿನಲ್ಲಿ ಸಂಯುಕ್ತ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆಹಾರ ಭದ್ರತಾ ಇಲಾಖೆ, ಮೀನುಗಾರಿಕಾ ಇಲಾಖೆ, ಮತ್ಸ್ಯ ಫೆಡ್ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಇದರಂತೆ ಈ ತಂಡ ಕಾಸರಗೋಡು ಮತ್ತು ಹೊಸದುರ್ಗದ ಹಲವು ಮೀನುಮಾರಾಟ ಕೇಂದ್ರಗಳಿಗೆ ದಿಢೀರ್ ದಾಳಿ ನಡೆಸಿ ಮಾರಾಟ ಮಾಡುತ್ತಿರುವ ಮೀನುಗಳನ್ನು ಪರೀಕ್ಷಿಸಿ ರಾಸಾಯನಿಕ ವಸ್ತುಗಳನ್ನು ಪ್ರಯೋಗಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಲು ಅವುಗಳ ಸ್ಯಾಂಪಲ್ ಪಡೆದು ಲ್ಯಾಬ್ಗಳಿಗೆ ಕಳುಹಿಸಿ ಕೊಟ್ಟಿದ್ದಾರೆ.
ಲ್ಯಾಬ್ ಪರೀಕ್ಷೆಯಲ್ಲಿ ರಾಸಾಯನಿಕ ಪದಾರ್ಥ ಬಳಸಿರುವುದು ಖಾತರಿಗೊಂಡಲ್ಲಿ ಅಂತಹ ಮೀನು ಮಾರಾಟಗಾರರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆಯೆಂದು ಅವರು ತಿಳಿಸಿದ್ದಾರೆ.
ಆರೋಗ್ಯಕ್ಕೆ ಹಾನಿಕರವಾದಂತಹ ಅಮೋನಿಯಾ, ಪೋರ್ಮಾಲಿನ್, ಸೋಡಿಯಂ ಬೆನ್ಸೋಯಟ್ಟ್ ಮೊಆಳದ ರಾಸಾಯನಿಕಗಳನ್ನು ಮೀನು ಹಾಳಾಗದಿರಲು ಸಿಂಪಡಿಸುತ್ತಾರೆ. ಇದನ್ನು ಸೇವಿಸಿದಲ್ಲಿ ಆರೋಗ್ಯದ ಮೇಲೆ ಬಾರಿ ಪರಿಣಾಮ ಬೀರುತ್ತಿದೆ.
ಈ ಬಗ್ಗೆ ಆಹಾರ ಭದ್ರತಾ ಇಲಾಖೆಗೆ ಈಗಾಗಲೇ ಹಲವಾರು ದೂರುಗಳು ಬಂದಿವೆ. ಈ ಕಾರ್ಯಾಚರಣೆ ನಡೆಸುವ ತಂಡ ಮೊದಲು ಮೀನು ಮಾರಾಟ ಕೇಂದ್ರಗಳನ್ನು ಪರಿಶೀಲಿಸಿ ರಾಸಾಯನಿಕ ವಸ್ತು ಪ್ರಯೋಗದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಮೀನು ಮಾರಾಟಗಾರರಿಗೆ, ದಾಸ್ತಾನುಗಾರರಿಗೆ ಮತ್ತು ಬೆಸ್ತರಿಗೆ ಅರಿವು ಮೂಡಿಸುವ ಕೆಲಸ ನಡೆಸುತ್ತಿದೆ.