ಪುತ್ತೂರು: ಬಪ್ಪಳಿಗೆ ನೆಲ್ಲಿಗುಂಡಿಯಲ್ಲಿ ದಲಿತ್ ಸೇವಾ ಸಮಿತಿ ತಾಲೂಕು ಸದಸ್ಯರೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಬಪ್ಪಳಿಗೆ ನೆಲ್ಲಿಗುಂಡಿ ನಿವಾಸಿ ಶಿವಪ್ಪ ಎಂಬವರ ಪುತ್ರ ದಲಿತ್ ಸೇವಾ ಸಮಿತಿ ಸದಸ್ಯ ಜಯರಾಮ(32) ರವರು ಹಲ್ಲೆಗೊಳಗಾದವರಾಗಿದ್ದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಾನು ಫೆ.15ರಂದು ನಗರಸಭೆ ಉಪಚುನಾವಣೆ ಫಲಿತಾಂಶದ ಬಳಿಕ ನಾನು ಮನೆಯ ಸಮೀಪವಿದ್ದ ವೇಳೆ ನಮ್ಮ ವಾರ್ಡ್ ನಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲವರು ಬಂದು ರಸ್ತೆಯಲ್ಲಿ ಪಟಾಕಿ ಸಿಡಿಸಿದ್ದರು. ಅದೇ ವಾರ್ಡ್ ನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿಕರಾದ ಆದಿದ್ರಾವಿಡ ಸಂಘದ ಜಿಲ್ಲಾಧ್ಯಕ್ಷ ಮೋಹನ್, ಮೋನಪ್ಪ ಮತ್ತು ಅವರ ಪುತ್ರ ದೀಕ್ಷಿತ್ ಎಂಬವರು ಪಟಾಕಿ ಸಿಡಿಸಿದವರು ಯಾರೆಂದು ಪ್ರಶ್ನಿಸಿ ನನಗೆ ಹಲ್ಲೆ ನಡೆಸಿದ್ದಾರೆ. ನನಗೆ ಹಲ್ಲೆ ನಡೆಸಿದ್ದನ್ನು ಪೊಲೀಸರಿಗೆ ದೂರು ನೀಡಲು ನನ್ನ ಮಹಿಂದ್ರ ದ್ವಿಚಕ್ರ ವಾಹನದಲ್ಲಿ ಹೋಗಲು ಪ್ರಯತ್ನಿಸಿದಾಗ ನನ್ನನ್ನು ಬೆನ್ನಟ್ಟಿ ಬಪ್ಪಳಿಗೆ ಸತ್ಯನಾರಾಯಣ ದೇವರ ಕಟ್ಟೆಯ ಬಳಿ ದೀಕ್ಷಿತ್ ಎಂಬವರು ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಜಯರಾಮರವರಿಂದ ಮಾಹಿತಿ ಪಡೆದಿದ್ದು, ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕ ಮತ್ತು ಮುಖಂಡರು ಘಟನೆಯ ಕುರಿತು ಎಸ್ಪಿಯವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹಲ್ಲೆಯ ಉದ್ದೇಶ ಬೇರೆ:
ನೆಲ್ಲಿಗುಂಡಿಯ ಸಮೀಪ ಸುಮಾರು 20 ಮನೆಗಳಿಗೆ ರಸ್ತೆ ಸೌಕರ್ಯ ನೀಡಲು ಸರಕಾರಿ ಜಮೀನನ್ನು ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡವರ ವಿರುದ್ಧ ಜಯರಾಮರವರು ದಲಿತ್ ಸೇವಾ ಸಮಿತಿ ವತಿಯಿಂದ ಹೋರಾಟ ಮಾಡಿದ್ದರು. ಈ ನಿಟ್ಟಿನಲ್ಲಿ ಹೋರಾಟಕ್ಕೆ ಫಲ ಸಿಕ್ಕಿದ್ದು, ಸಹಾಯಕ ಕಮೀಷನರ್ ಸ್ಥಳ ತನಿಖೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಸಮಯ ಸಾಧಿಸಿ ಮೋಹನ್ ಮತ್ತು ಮೋನಪ್ಪರವರು ಜಯರಾಮರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕರವರು ತಿಳಿಸಿದ್ದಾರೆ.