ಮೂಡುಬಿದಿರೆ: ಎಂ.ಕೆ. ಅನಂತರಾಜ್ ಅವರ ಸ್ಮರಣಾರ್ಥ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ಉದ್ಘಾಟಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, `ಬಾಲ್ ಬ್ಯಾಡ್ಮಿಂಟನ್ ಹಳೆಯ ಕ್ರೀಡೆ. ಶಟಲ್ ಬ್ಯಾಡ್ಮಿಂಟನ್ ಬಂದ ನಂತರ ಬಾಲ್ ಬ್ಯಾಡ್ಮಿಂಟನ್ ವ್ಯಾಪ್ತಿ ಸೀಮಿತವಾಗಿದೆ. ಹೀಗಿದ್ದರೂ ಬಾಲ್ ಬ್ಯಾಡ್ಮಿಂಟನ್ ತನ್ನದೇ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಇದನ್ನು ಆಡಲು ಸಾಕಷ್ಟು ಚಾಣಾಕ್ಷತೆ, ಕೌಶಲ್ಯ ಇರಬೇಕಾಗುತ್ತದೆ. ಬಾಲ್ ಬ್ಯಾಡ್ಮಿಂಟನ್ ಮತ್ತೆ ಮುಖ್ಯ ವಾಹಿನಿಗೆ ಬರುವಂತಾಗಬೇಕು. ಬಾಲ್ ಬ್ಯಾಡ್ಮಿಂಟನ್ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಇಂತಹ ಪಂದ್ಯಾವಳಿಗಳು ಸಹಾಯಕವಾಗಿವೆ ಎಂದರು.
ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇಶನ್ ನ ಕಾರ್ಯದರ್ಶಿ ರಾಜಾರಾವ್ ಮಾತನಾಡಿ, ಕ್ರೀಡಾಳುಗಳ ಬೇಡಿಕೆಯನ್ನು ಈಡೇರಿಸಲು ಸಂಸ್ಥೆ ಶ್ರಮಿಸುತ್ತಿದೆ. ಎಲ್ಲಾ ಅವಶ್ಯಕತೆಗಳನ್ನು ಒಂದೇ ಬಾರಿಗೆ ಪೂರೈಸದಿದ್ದರೂ ಹಂತ ಹಂತವಾಗಿ ಕ್ರೀಡಾರ್ಥಿಗಳು ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಅದ್ಭುತವಾಗಿ ಕ್ರೀಡಾಕೂಟಗಳನ್ನು, ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರಮವನ್ನು ಅವರು ಶ್ಲಾಘಿಸಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಯುಪಿಸಿಎಲ್ ನಂದಿಕೂರು ಘಟಕದ ಕಾರ್ಯನಿರ್ವಹನಾ ನಿರ್ದೇಶಕ ಸಿಇಒ ಕಿಶೋರ್ ಆಳ್ವ, ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಕಾರ್ಯದರ್ಶಿ ದಿನೇಶ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಮೊಹಮ್ಮದ್ ಇಲ್ಯಾಸ್, ಅನಿವಾಸಿ ಭಾರತೀಯ ಸರ್ವೋತ್ತಮ ಶೆಟ್ಟಿ, ವಿವಿಧ ತಂಡಗಳ ಕೋಚ್ ಗಳು ಹಾಗೂ ರೆಫರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು. ಸತೀಶ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ: 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದೆಹಲಿ, ಜಮ್ಮು ಕಾಶ್ಮೀರ, ಹರಿಯಾಣ, ಪಂಜಾಬ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ 30 ತಂಡಗಳು ಭಾಗವಹಿಸಿವೆ. ಉದ್ಘಾಟನೆಗೂ ಮೊದಲು ನಡೆದ ಪಥಸಂಚಲನದಲ್ಲಿ ಪ್ರತೀ ತಂಡದ ಸದಸ್ಯರು ತಮ್ಮ ಜೆರ್ಸಿಗಳನ್ನು ಧರಿಸಿ ಸಾಗಿಬಂದದ್ದು ಆಕರ್ಷಕವಾಗಿತ್ತು. ಪಥ ಸಂಚಲನದಲ್ಲಿ ಕ್ರೀಡಾಪಟುಗಳಿಗೆ ಎನ್ಸಿಸಿಯ ಆರ್ಮಿ, ನೇವಿ ಹಾಗೂ ಏರ್ ಫೋರ್ಸ್ ಕೆಡೆಟ್ ಗಳು, ಸ್ಕೌಟ್ಸ್ ಗೈಡ್ಸ್, ಆಳ್ವಾಸ್ ಬಿಪಿಎಡ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಕ್ರೀಡಾ ವಿದ್ಯಾರ್ಥಿಗಳು ಸಾಥ್ ನೀಡಿದರು. ಭಾರತ ಹಾಗೂ ಕರ್ನಾಟಕದ ಜಾನಪದ ಕಲೆಯನ್ನು ಬಿಂಬಿಸುವ ಕೊಂಬು, ಚೆಂಡೆ, ಮಣಿಪುರದ ದೋಲ್ ಚಲಂ, ಶ್ರೀಲಂಕಾದ ಜಾನಪದ ಕಲಾತಂಡ ಹಾಗೂ ಡೊಳ್ಳುಕುಣಿತದ ತಂಡಗಳೂ ಭಾಗವಹಿಸಿ ಪಥಸಂಚಲನದ ಅಂದವನ್ನು ಹೆಚ್ಚಿಸಿದವು. ರಾಷ್ಟ್ರಮಟ್ಟದ 33 ಪುರುಷರ ಹಾಗೂ ಮಹಿಳೆಯರ 29 ತಂಡಗಳ ಕ್ರೀಡಾಪಟುಗಳು ಪಥಸಂಚಲನದಲ್ಲಿ ಪಾಲ್ಗೊಂಡರು.