ಚಾಮರಾಜನಗರ: ಎಷ್ಟೇ ಎಚ್ಚರಿಕೆ ವಹಿಸಿದ್ದರೂ ಕಿಡಿಗೇಡಿಗಳು ಮಾತ್ರ ತಮ್ಮ ಕೃತ್ಯವನ್ನು ನಿಲ್ಲಿಸುವ ಲಕ್ಷಣ ಕಂಡು ಬರುತ್ತಿಲ್ಲ. ಬೇಸಿಗೆಯಲ್ಲಿ ಅರಣ್ಯದಲ್ಲಿ ಕುರುಚಲು ಗಿಡಗಳು ಒಣಗುವುದರಿಂದ ಚಿಕ್ಕ ಬೆಂಕಿ ಕಿಡಿ ಬಿದ್ದರೂ ಸಾಕು ಧಗ್ಗನೆ ಹೊತ್ತಿ ಉರಿಯುತ್ತದೆ. ಹೀಗಿರುವಾಗ ಬೇಕಂತೆಲೇ ಕಿಡಿಗೇಡಿಗಳು ಬೆಂಕಿ ಹಚ್ಚಿದರೆ ಪರಿಸ್ಥಿತಿ ಏನಾಗಬೇಡ? ಇವತ್ತು ಬಂಡೀಪುರ ಹುಲಿ ಯೋಜನೆಯ ಕಲ್ಕೆರೆ ವಲಯದಲ್ಲಿ ಆಗಿದ್ದೂ ಅದೇ ಕೃತ್ಯ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅರಣ್ಯ ಸಿಬ್ಬಂದಿ ಸಜೀವ ದಹನಗೊಳ್ಳುವುದರೊಂದಿಗೆ, ಪ್ರಾಣಿ, ಪಕ್ಷಿ, ಜಂತುಗಳು, ಗಿಡಮರಗಳು ನಾಶವಾಗಿವೆ.
ಅಂದಾಜು ಪ್ರಕಾರ ಸುಮಾರು 350 ಎಕರೆಗೂ ಹೆಚ್ಚಿನ ಅರಣ್ಯ ಭಸ್ಮವಾಗಿದೆ. ಬೆಂಕಿ ನಂದಿಸಲು ಹೋದ ಸಿಬ್ಬಂದಿ ಮುರುಗಪ್ಪ(30) ಸಾವನ್ನಪ್ಪಿದ್ದು, ಇನ್ನು ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ಮುರುಗಪ್ಪ ಮೂಲತಃ ಬಿಜಾಪುರ ಜಿಲ್ಲೆಯವರಾಗಿದ್ದಾರೆ. ಗಾಯಗೊಂಡವ ಪೈಕಿ ಅರಣ್ಯಾಧಿಕಾರಿ ಗಂಗಾಧರ್ ಎಂಬುವರು ಸೇರಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಲ್ಕೆರೆ ವಲಯಕ್ಕೆ ಸೇರಿದ ಐನೂರು ಮಾರಿಗುಡಿ ಸಮೀಪ ಸೇರಿ 5 ಕಡೆಗಳಲ್ಲಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿಯಿಟ್ಟಿದ್ದಾರೆ ಎನ್ನಲಾಗಿದೆ.