ಮಡಿಕೇರಿ: ಮಕ್ಕಳನ್ನು ಕೇವಲ ಅಂಕದ ಚೌಕಟ್ಟಿನೊಳಗೆ ಹುದುಗಿಸದೆ ಮುಂದಿನ ಅವರ ಉತ್ತಮ ಜೀವನದ ಮೌಲ್ಯಗಳ ಬೀಜವನ್ನು ಬಿತ್ತುವಂತೆ ಪೋಷಕರಿಗೆ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಅವರು ಕಿವಿ ಮಾತು ಹೇಳಿದರು.
ನಗರದ ಭಾರತೀಯ ವಿದ್ಯಾಭವನದ ಕಲಾ ಭಾರತಿಯ ಆರ್ಟ್ ಗ್ಯಾಲರಿಯಲ್ಲಿ ಆಯೋಜಿತ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿ ಮುಗ್ಧ ಮಕ್ಕಳು ಚಿತ್ರಿಸಿದ ಚಿತ್ರಕಲೆಗಳೇ ನಮ್ಮನ್ನು ಮಾತನಾಡಿಸುವಂತಿವೆ. ನಿತ್ಯ ಹರಿದ್ವರ್ಣದಿಂದ ಕೊಡಗು ಕೂಡಿದೆಂಬುದಕ್ಕೆ ಮಕ್ಕಳು ಚಿತ್ರಿಸಿದ ಚಿತ್ರಕಲೆಗಳೇ ಸಾಕ್ಷಿಯಾಗಿದೆ ಎಂದರು.
ಮಕ್ಕಳ ಚಿತ್ರಕಲೆಗಳನ್ನು ನೋಡಿದಾಗ ಇದರಲ್ಲಿ ಅಧ್ಯಯನ ಹಾಗೂ ಅಭ್ಯಾಸಗಳಿಂದ ಕಲೆಗಳು ಮೂಡಿ ಬಂದಂತಿವೆಂಬುದನ್ನು ಸಾರಿ ಹೇಳುತ್ತವೆ. ಈ ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿವೆಂಬುದನ್ನು ಬಿಂಬಿಸುತ್ತಿವೆ ಎಂದರು.
ಅಭಿರುಚಿಗಳು ಸಹವಾಸ ಹಾಗೂ ಸಂಬಂಧದಿಂದ ಬರುತ್ತವೆ, ಇವುಗಳು ನಮ್ಮನ್ನು ಸಮೃದ್ಧಗೊಳಿಸುತ್ತವೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಉದಾಹರಣೆ ಎಂದ ಅವರು ಎಲ್ಲ ರೀತಿಯ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ದ.ಕ.ಜಿಲ್ಲೆ ಮುಂದಿರುತ್ತದೆ, ಆದರೆ ಕಪ್ಪು ಚುಕ್ಕೆ ಎಂಬಂತೆ ಇವುಗಳ ಪೈಕಿ ಕೋಮು ಗಲಭೆಯಲ್ಲಿ ಕೂಡ ದ.ಕ.ಜಿಲ್ಲೆ ಮುಂದಿರುವುದು ದೌರ್ಭಾಗ್ಯ ಎಂದು ಆತಂಕ ವ್ಯಕ್ತಪಡಿಸಿದರು.
ಕಲ್ಚರ್ ಎಂಬುದು ದೇಶದ ಮೊದಲ ಅಗ್ರಿಕಲ್ಚರ್ ಆಗಿದೆ. ಇವುಗಳಲ್ಲಿ ಸಹವಾಸ ಮತ್ತು ಸಂಬಂಧವನ್ನು ಮೂಡಿಸುತ್ತದೆ. ಇಸ್ರೇಲ್ ನಂತೆ ಇಲ್ಲೂ ಕೂಡ ಸಹವಾಸ ಶಿಕ್ಷಣ ಪದ್ಧತಿಯಿದ್ದರೆ ಸಾಧನೆಗೆ ಪೂರಕವಾಗುತ್ತದೆ. ಆದರೆ ನಮ್ಮಲ್ಲಿ ನಾಲ್ಕು ಗೋಡೆಗಳ ನಡುವಿನ ಶಿಕ್ಷಣವಿರುವುದರಿಂದ ಲೋಕಜ್ಞಾನ ಶಿಕ್ಷಣದಿಂದ ಬಹಳಷ್ಟು ದೂರವಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಆಯೋಜಕರಲ್ಲೊಬ್ಬರಾದ ಕೊಡಗು ವಿದ್ಯಾಲಯದ ಚಿತ್ರಕಲೆ ಶಿಕ್ಷಕ ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣದೊಂದಿಗೆ ಅವರಿಗಿಷ್ಟವಾದ ಅವರ ಮುಂದಿನ ಉತ್ತಮ ಭವಿಷ್ಯ ರೂಪಿಸಲು ಸಹಾಯಕವಾಗುವಂತಹ ಪಠ್ಯೇತರ ಚಟುವಟಿಕೆಗಳಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
ಪ್ರತಿದಿನ ಸುಮಾರು ಒಂದೂವರೆ ಗಂಟೆ ಕಾಲ ಸಮಯವನ್ನು ತಮ್ಮ ಮಕ್ಕಳೊಂದಿಗೆ ಬೆರೆಯಲು ಮೀಸಲಿಡುವಂತೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕರಾದ ಬಿ.ಆರ್.ಸತೀಶ್ ಮತ್ತು ಮಾಲ್ದಾರೆ ಬಾವ ಅಲ್ಲದೆ, ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.