ಮೂಡುಬಿದಿರೆ: ಆಸ್ತಿ ತೆರಿಗೆಯನ್ನು ಶೇ. 15ರಷ್ಟು ಏರಿಸಲು, ಮನೆಗಳ ಘನತ್ಯಾಜ್ಯವಿಲೇವಾರಿ ಕುರಿತಾದ ಶುಲ್ಕವನ್ನು ಹಾಗೆಯೇ ಇರಿಸಿಕೊಳ್ಳಲು ನಿರ್ಧರಿಸುವ ಕುರಿತು ವಿವಿಧ ತೆರಿಗೆಗಳನ್ನು ಹೆಚ್ಚಿಸುವ ಕುರಿತು ಮುಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಮೂಡಬಿದಿರೆ ಪುರಸಭೆಯ ವ್ಯಾಪ್ತಿಯಲ್ಲಿ ಉದ್ಯಮ ಪರವಾನಗಿ ಶುಲ್ಕಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಚರ್ಚಿಸಲಾಯಿತು.
ಉಳಿದಂತೆ ವಾಣಿಜ್ಯ ಮಳಿಗೆಗಳಿಗೆ ರೂ. 100ರಷ್ಟು ಏರಿಕೆ, ಉದ್ಯಮ ಲೈಸನ್ಸ್ಗಳಿಗೆ ರೂ. 100 ಏರಿಕೆ, ದೊಡ್ಡ ಮಟ್ಟದ ವಾಣಿಜ್ಯ ವ್ಯವಹಾರಗಳಿಗೆ ರೂ. 100ರಿಂದ 500 ಏರಿಕೆ, ವಿಶೇಷ ಸಮಾರಂಭಗಳನ್ನು ನಡೆಸುವವರಿಗೆ ರೂ. 500ರಷ್ಟು ವಿಧಿಸುವ ಬಗ್ಗೆ ತೀರ್ಮಾನಿಸಲಾಯಿತು.
ಯಾವುದೆಕ್ಕೆಲ್ಲ ಏರಿಕೆ?
ಸಮಾಜ ಮಂದಿರದಲ್ಲಿ ವಿಶೇಷ ಸಮಾರಂಭಗಳಲ್ಲಿ ಆಹಾರ ತ್ಯಾಜ್ಯವಿಲೇವಾರಿಗಾಗಿ ಗ್ರಾಹಕರಿಂದ ರೂ. 1,000 ಸಂಗ್ರಹಿಸಲು ನಿರ್ಧರಿಸಲಾಯಿತು. ಉಳಿದ ಕಲ್ಯಾಣ ಮಂಟಪಗಳಿಗೆ ಆಸನ ವ್ಯವಸ್ಥೆ (250ರಿಂದ 1000 ಮತ್ತು ಅಧಿಕ)ಗೆ ತಕ್ಕಂತೆ ರೂ. 4,000ದಿಂದ 7,000ರವರೆಗೆ, ಪಾರ್ಟಿ ಹಾಲ್ ಗಳಿಗೆ ರೂ. 3,000 ವಾರ್ಷಿಕ ಶುಲ್ಕ ಪಾವತಿಸಲು ನಿರ್ಣಯಿಸಲಾಯಿತು. ಹೀಗೆಯೇ 278 ಬಗೆಯ ವ್ಯವಹಾರಗಳಿಗೆ ಶೇ. 12ರಿಂದ ಮೇಲ್ಪಟ್ಟು 20ರವರೆಗೆ, ಕೆಲವು ಉದ್ಯಮಗಳಿಗೆ 100 ಶೇ.ಕ್ಕಿಂತಲೂ ಅಧಿಕ ಪರವಾನಗಿ ಶುಲ್ಕ ಏರಿಸಲಾಗಿದೆ. ಇಂಥ ಏರಿಕೆಗಳಿಗೆ ಮದ್ಯ, ಬಾರ್ ವ್ಯವಹಾರ, ಎಲೆಕ್ಟ್ರಾನಿಕ್ಸ್ ಟಿ.ವಿ., ಫ್ರಿಜ್, ಕುಕ್ಕರ್ ಸಹಿತ ಗೃಹೋಪಯೋಗಿ ವಸ್ತುಗಳು, ಟೈಲ್ಸ್, ಮಾರ್ಬಲ್ಸ್, ಗ್ರಾನೈಟ್ಸ್, ಸಿಮೆಂಟ್ ಮತ್ತು ಕಟ್ಟಡ ರಚನಾ ಸಾಮಗ್ರಿ ಮಾರಾಟ, ದ್ವಿಚಕ್ರ ವಾಹನ ಪ್ರದರ್ಶನ ಮಾರಾಟ, ಹೊಲ್ಲೋ ಬ್ಲಾಕ್ ಇತರ ಇಟ್ಟಿಗೆ ತಯಾರಿಕಾ ಘಟಕ ಮೊದಲಾದ ವ್ಯವಹಾರಗಳನ್ನು ಸೇರಿಸಲಾಗಿದೆ. 2 ಅಶ್ವಶಕ್ತಿಯ ವಿದ್ಯುತ್ ಬಳಸುವಿಕೆಯಿಂದ ತೊಡಗಿ 500 ಅಶ್ವಶಕ್ತಿಯವರೆಗಿನ ವಿವಿಧ ಹಂತಗಳಿಗೆ ಈಗಿರುವ ಪರವಾನಗಿ ಶುಲ್ಕವನ್ನು ಶೇ. 20ರವರೆಗೆ ಏರಿಸಲಾಗಿದೆ.
ಮನೆಗಳಿಗೆ ಗರಿಷ್ಟ 15,000 ಲೀ. ನೀರಿನ ಬಳಕೆ ಈಗಿರುವ ರೂ.90ನ್ನೇ ವಿಧಿಸಲು, ಹೆಚ್ಚುವರಿ 1,000ಲೀ.ಗೆ ರೂ.100ರಂತೆ, ವಾಣಿಜ್ಯ ಉದ್ದೇಶಗಳಿಗೆ ರೂ.225ರಿಂದ 250ಕ್ಕೆ ಮತ್ತು ಹೆಚ್ಚುವರಿ 1000 ಲೀ.ಗೆ ರೂ. 500ರಂತೆ ಶುಲ್ಕ ಆಕರಿಸಲು ನಿರ್ಧರಿಸಲಾಯಿತು.
ಆರಾಧನಾ ಕೇಂದ್ರಗಳಿಗೆ ಉಚಿತ ನೀರು:
ಸರ್ಕಾರಿ ಶಾಲೆಗಳಿಗೆ, ಆರಾಧನಾ ಕೇಂದ್ರಗಳಿಗೆ ಉಚಿತ ನೀರು ನೀಡುವ ಜತೆಗೆ ಬಿಸಿಯೂಟ ಇರುವ ಶಾಲೆ (ಆಂಗ್ಲಮಾಧ್ಯಮ ಹೊರತುಪಡಿಸಿ)ಗಳಿಗೂ ಈ ಕೊಡುಗೆಯನ್ನು ವಿಸ್ತರಿಸಬೇಕು ಎಂದು ಸದಸ್ಯರು ವಿನಂತಿಸಿದರು. ಅಂತೆಯೇನಿರ್ಣಯವಾಯಿತು. ಪುರಸಭಾಧ್ಯಕ್ಷೆ ಹರಿಣಾಕ್ಷಿ, ಪಿ.ಕೆ. ಥಾಮಸ್, ಸುರೇಶ್ ಕೋಟ್ಯಾನ್, ಎಂ. ಬಾಹುಬಲಿ ಪ್ರಸಾದ್, ಪ್ರೇಮಾ ಸಾಲ್ಯಾನ್, ರಮಣಿ ಮೊದಲಾದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮುಖ್ಯಾಧಿಕಾರಿ ಶೀನ ನಾಯ್ಕ್, ಪರಿಸರ ಅಭಿಯಂತರೆ ಶಿಲ್ಪಾ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.