ಸುಳ್ಯ: ಇಂದು ಮಂಗಳೂರಿನಲ್ಲಿ ಸಿಪಿಐಎಂ ನೇತೃತ್ವದಲ್ಲಿ ನಡೆಯಲಿರುವ ಸೌಹಾರ್ದ ರ್ಯಾಲಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುವುದನ್ನು ವಿರೋಧಿಸಿ ಸಂಘ ಪರಿವಾರ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಳ್ಯದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಭದ್ರತೆಗಾಗಿ ಹೆಚ್ಚು ಪೊಲೀಸ್ ಮತ್ತು ಭದ್ರತಾ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಸುಳ್ಯದಲ್ಲಿ ಪೊಲೀಸರು ಬಿಗು ಭದ್ರತೆಯನ್ನು ಏರ್ಪಡಿಸಲಾಗಿದೆ. ಇದರ ಭಾಗವಾಗಿ ಶುಕ್ರವಾರ ಸಂಜೆ ಸುಳ್ಯ ನಗರದಲ್ಲಿ ಪೋಲಿಸ್ ಪಥ ಸಂಚಲನ ನಡೆಯಿತು. ತಾಲೂಕಿನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಎಂಟು ಮಂದಿ ಪಿಎಸ್ಐ, 11 ಎಎಸ್ಐ, 60 ಮಂದಿ ಕೆಎಸ್ಆರ್ ಪಿ, 60 ಮಂದಿ ನಾಗರಿಕ ಪೋಲಿಸ್, 15 ಸಂಚಾರಿ ತುಕಡಿಗಳನ್ನು ಭದ್ರತೆಗಾಗಿ ಹೆಚ್ಚುವರಿಯಾಗಿ ತಾಲೂಕಿನಾದ್ಯಂತ ನಿಯೋಜಿಸಲಾಗಿದೆ. ಇದರ ಜತೆಗೆ ಗೃಹರಕ್ಷಕಾದಳದ ಸಿಬ್ಬಂದಿಗಳೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಸುಳ್ಯ ವೃತ್ತ ನೀರಿಕ್ಷಕ ಕೃಷ್ಣಯ್ಯ ತಿಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿಯೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು ವಾಹನಗಳನ್ನು ತಪಾಸಣೆಗೊಳಪಡಿಸಲಾಗುತಿದೆ. ಗಡಿಯಲ್ಲಿಯೂ ಪೊಲೀಸರು ಜಾಗೃತಿ ವಹಿಸಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಸುಳ್ಯದಲ್ಲಿಯೂ ಹರತಾಳಕ್ಕೆ ಕರೆ ನೀಡಿದ್ದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹರತಾಳಕ್ಕೆ ಸಹಕಾರ ನೀಡುವಂತೆ ವರ್ತಕರಲ್ಲಿ ಮತ್ತು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.