ಉಳ್ಳಾಲ:ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಭೇಟಿ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಜಿಲ್ಲೆಯಾದ್ಯಂತ ಕರೆ ನೀಡಿರುವ ಮಂಗಳೂರು ಬಂದ್ ಹಿನ್ನೆಲೆಯಲ್ಲಿ ಉಳ್ಳಾಲ, ಕೊಣಾಜೆ ಹಾಗೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಕೃತ್ಯವನ್ನು ಮುಂದುವರಿಸಿದ್ದು, ಮೂರು ಕರ್ನಾಟಕ ಸಾರಿಗೆ ಸೇರಿದಂತೆ ಒಂದು ಖಾಸಗಿ ಬಸ್ಸುಗಳಿಗೆ ಕಲ್ಲುತೂರಾಟ ನಡೆಸಿರುವ ಘಟನೆಯಲ್ಲಿ ಚಾಲಕರಿಬ್ಬರು ಗಾಯಗೊಂಡಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ತಲಪಾಡಿ ಎಂಬಲ್ಲಿ ಪೊಲೀಸ್ ಗಸ್ತು ನಿರತ ಕರ್ನಾಟಕ ಸಾರಿಗೆ ಬಸ್ಸಿಗೆ ಕಲ್ಲೆಸೆಯಲಾಗಿತ್ತು. ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುತ್ತಿದ್ದಾಗ ದುಷ್ಕೃತ್ಯ ಎಸೆಯಲಾಗಿದೆ. ಪರಿಣಾಮ ಗಾಜು ಸಂಪೂರ್ಣ ಪುಡಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಮಧ್ಯಾಹ್ನ 11ರ ವೇಳೆಗೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿ ಎಂಬಲ್ಲಿ ಗ್ರಾಮಾಂತರ ಸಾರಿಗೆ ಬಸ್ಸಿಗೆ ಕಲ್ಲೆಸೆದು ಹಾನಿ ಮಾಡಲಾಗಿದೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುವ ಸಂದರ್ಭ ಘಟನೆ ನಡೆದಿದೆ. ಬಳಿಕ .11.30 ಸುಮಾರಿಗೆ ತಲಪಾಡಿಯಿಂದ ಮಂಗಳೂರಿಗೆ ಹೊರಟಿದ್ದ ಖಾಸಗಿ ಮರೋಳಿ ಬಸ್ಸಿನ ಗಾಜನ್ನು 6 ಮಂದಿಯ ತಂಡ ಕೆಳಗಿನ ತಲಪಾಡಿ ಸಮೀಪ ಪುಡಿಗೈದಿದೆ. ಈ ವೇಳೆ ಚಾಲಕ ವಿಜಯ್ ಎಂಬವರಿಗೆ ಗಂಭೀರ ಗಾಯವಾಗಿದೆ. ಅದೇ ವೇಳೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನ ಗಾಜಿಗೆ ಸುಮಾರು 10 ರಷ್ಟು ಕಲ್ಲುಗಳನ್ನು ಎಸೆದ ಕಿಡಿಗೇಡಿಗಳು ಬಳಿಕ ಚಾಲಕ ಮಟಪತಿ (35) ಎಂಬವರಿಗೆ ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳ ದಾಳಿಗೆ ಬೆದರಿ ಚಾಲಕ ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಇದೇ ವೇಳೆ ಬಸ್ಸಿನಲ್ಲಿದ್ದ ಸುಮಾರು 25 ರಷ್ಟಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಪುರಷರು ಅರ್ಧ ಕಿ.ಮೀ ನಷ್ಟು ಓಡಿದ್ದಾರೆ.
ಆರ್ ಟಿಓ ಜಿಲ್ಲಾಧಿಕಾರಿ ಹೊಣೆ
ಬೆಳಗ್ಗಿನಿಂದ ಬಸ್ಸನ್ನು ರಸ್ತೆಗೆ ಇಳಿಸಿರಲಿಲ್ಲ. ಆದರೆ ಆರ್ ಟಿಓ ಮತ್ತು ಜಿಲ್ಲಾಧಿಕಾರಿಗಳು ಬಸ್ ತೆಗೆಯದೇ ಇದ್ದಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಹಾಕುವುದಾಗಿ ಬೆದರಿಸಿದರು. ಇದಕ್ಕೆ ಹೆದರಿ ಅನಿವಾರ್ಯವಾಗಿ ಬಸ್ಸನ್ನು ರಸ್ತೆಗೆ ಇಳಿಸಬೇಕಾಯಿತು. ಇದೀಗ ಸಾವಿರಾರು ಬೆಲೆಬಾಳುವ ಗಾಜು ಪುಡಿಯಾಗಿದೆ. ಇದಕ್ಕೆ ಆರ್ ಟಿಓ, ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಖಾಸಗಿ ಬಸ್ಸು ಮಾಲೀಕರಾದ ಶರತ್ ಆರೋಪಿಸಿದ್ದಾರೆ.