ಸುಳ್ಯ: ತಾಲೂಕಿಗೆ ಮಂಜೂರಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಅನುಷ್ಠಾನದಲ್ಲಿ ವಿಳಂಬ ಆಗಿರುವ ಕುರಿತು ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸುವಂತೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಆದೇಶ ನೀಡಿದ್ದಾರೆ. ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾ.ಪಂ.ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಳ್ಯ ತಾಲೂಕಿನಲ್ಲಿ ಒಟ್ಟು 13 ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು ಅದು ಒಂದು ವರ್ಷಕ್ಕಿಂತಲೂ ಮಿಕ್ಕಿ ಸಮಯದಿಂದ ಕುಂಟುತಿದೆ ಎಂದು ತಾ.ಪಂ.ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರಲ್ಲಿ 11 ಕಾಮಗಾರಿ ಪ್ರಗತಿಯಲ್ಲಿದೆ ಉಳಿದ ಎರಡು ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ ಎಂದು ಇಂಜಿನಿಯರ್ ಮಹಿತಿ ನೀಡಿದರು. ಇದರ ಬಗ್ಗೆ ಗಂಭೀರ ಚರ್ಚೆ ನಡೆದು ಈ ಕುರಿತು ಸರ್ವೇ ನಡೆಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಎಂದು ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇನ್ನೂ ಶೂ ಬಂದಿಲ್ಲ: ಅಧ್ಯಯನ ವರ್ಷ ಮುಗಿಯುತ್ತಾ ಬಂದರೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದ್ದರೂ ಮಕ್ಕಳಿಗೆ ವಿತರಿಸಲು ಶೂ ಬಂದಿಲ್ಲ ಎಂದು ಶಾಲೆಯ ಪ್ರಾಂಶುಪಾಲರು ಸಭೆಗೆ ತಿಳಿಸಿದರು. ಈ ಕುರಿತು ಚರ್ಚೆ ನಡೆದು ಇನ್ನು ಶೂ ಬರದಿದ್ದರೆ ಇನ್ನು ಅದು ವಿತರಿಸುವುದು ಯಾವಾಗ ಎಂದು ಸದಸ್ಯರು ಪ್ರಶ್ನಿಸಿದರು. 2008 ರಲ್ಲಿ ಪ್ರಾರಂಭಗೊಂಡ ಮೊರಾರ್ಜಿ ವಸತಿ ಶಾಲೆಗೆ ಮಕ್ಕಳಿಗೆ ಅಗತ್ಯವಾದ ಮಂಚ, ಡೈನಿಂಗ್ ಟೇಬಲ್ ಬಂದಿಲ್ಲ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದಾಗ ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಶ್ರೀನಿವಾಸ ಪೂಜಾರಿ ಹೇಳಿದರು.
ಲೋವೋಲ್ಟೇಜ್ ಸಮಸ್ಯೆ-ಕುಡಿಯುವ ನೀರಿಗೆ ತತ್ವಾರ: ಲೋವೋಲ್ಟೇಜ್ ಸಮಸ್ಯೆ ಮತ್ತಿತರ ವಿದ್ಯುತ್ ವೈಫಲ್ಯದಿಂದ ಪಂಜ, ಜಾಲ್ಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ತೀವ್ರ ಸಮಸ್ಯೆ ಉಂಟಾಗುತಿದೆ ಎಂದು ಸದಸ್ಯರು ದೂರಿದರು. 110 ಕೆವಿ ಸಬ್ಸ್ಟೇಷನ್ ಆಗದ ಕಾರಣ ಸುಳ್ಯ ತಾಲೂಕಿಗೆ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಇಂಜಿನಿಯರ್ ಹೇಳಿದರು. ವಿದ್ಯುತ್ ವಾಹಕ ತಂತಿಗಳ ಬದಲಾವಣೆಗೆ ಎರಡು ವರ್ಷಗಳ ಹಿಂದೆಯೇ ಟೆಂಡರ್ ಆದರೂ ಕಾಮಗಾರಿ ಯಾಕೆ ಆಗಿಲ್ಲ ಎಂದು ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಹೇಳಿದಾಗ, ಈ ಕುರಿತು ವಿಧಾನ ಪರಿಷತ್ ಸದಸ್ಯರು ಇಂಜಿನಿಯರ್ ಅನ್ನು ಪ್ರಶ್ನಿಸಿದರು.
ಟೆಂಡರ್ ಆಗಿದ್ದರೂ ರೇಟ್ ನಲ್ಲಿ ಬದಲಾವಣೆ ಆಗಿರುವ ಕಾರಣ ಮರು ಟೆಂಡರ್ ಆಗಬೇಕಾಗಿದೆ ಎಂದು ಇಂಜಿನಿಯರ್ ಉತ್ತರಿಸಿದರು. ಈ ಕುರಿತು ಚರ್ಚೆ ನಡೆದು ಕುಡಿಯುವ ನೀರಿನ ಲೋ ವೋಲ್ಟೇಜ್ ಸಮಸ್ಯೆಯನ್ನು ಪರಿಹರಿಸಿ ವಿದ್ಯುತ್ ಸಮಸ್ಯೆಯ ಬಗ್ಗೆ ಮುಂದಿನ ತಾ.ಪಂ.ಸಭೆಗೆ ಮುಂಚಿತವಾಗಿ ವರದಿ ಸಲ್ಲಿಸಬೇಕೆಂದು ಅವರು ಇಂಜಿನಿಯರ್ ಗೆ ಸೂಚಿಸಿದರು.
ಅರಣ್ಯ ಉತ್ಪತ್ತಿ ಸಂಗ್ರಹ ವಿಚಾರದಲ್ಲಿ ಗೊಂದಲ ಉಂಟಾಗುತಿದೆ, ಇದು ಕೆಲವೊಮ್ಮೆ ಘರ್ಷಣೆಗೂ ಕಾರಣವಾಗುತಿದೆ ಎಂದು ಸದಸ್ಯ ಅಬ್ದುಲ್ ಗಫೂರ್ ತಿಳಿಸಿದರು. ಈ ಕುರಿತು ಚರ್ಚೆ ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಅವೈಜ್ಞಾನಿಕವಾಗಿ ಹಾಲು ಮಡ್ಡಿಗಳನ್ನು ತೆಗೆಯುವುದರಿಂದ ಮರ ಒಣಗಿ ಅರಣ್ಯ ನಾಶವಾಗುತ್ತಿದೆ. ಹೀಗೆ ಒಣಗುವ ಮರಗಳು ಒಣಗಿ ಬಿದ್ದು ಅಪಾಯವನ್ನು ತಂದೊಡ್ಡುತಿದೆ ಎಂದು ಅಶೋಕ್ ನೆಕ್ರಾಜೆ ಹೇಳಿದರು. ಕೆಲವೊಂದು ಷರತ್ತಿನ ಮೇರೆಗೆ ಹಾಲು ಮಡ್ಡಿ ತೆಗೆಯಲು ಅವಕಾಶ ನೀಡಲಾಗಿದೆ. ಅವೈಜ್ಞಾನಿಕವಾಗಿ ಹಾಲು ಮಡ್ಡಿ ಸಂಗ್ರಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.
94ಸಿ, ಮನೆ ನಿವೇಶನ ಕುರಿತು ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಂದ ಮಾಹಿತಿ ಪಡೆದರು. 94ಸಿ ಯೋಜನೆಯಡಿಯಲ್ಲಿ 4115 ಮಂದಿಗೆ ಮಂಜೂರಾಗಿದ್ದು 2780 ಹಕ್ಕು ಪತ್ರ ನೀಡಲಾಗಿದೆ, 2780 ಆ ಹಕ್ಕು ಪತ್ರ ನೀಡಲು ಬಾಕಿ ಇದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಮನೆ ನಿವೇಶನಕ್ಕೆ 89 ಎಕ್ರೆ ಮಂಜೂರಾತಿಗೆ ಬೇಡಿಕೆಯಿಟ್ಟಿದ್ದು, 25 ಎಕ್ರೆ ಮಂಜೂರಾತಿಯಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಬಂದೂಕು ಪರವಾನಗಿ ನೀಡುವುದಕ್ಕೆ ಪೊಲೀಸ್ ಇಲಾಖೆಯು ಆಕ್ಷೇಪಣೆ ನೀಡುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯರು ತಿಳಿಸಿದರು. ಈ ಕುರಿತು ಚರ್ಚೆ ನಡೆದು ಆಕ್ಷೇಪಣೆ ನೀಡುವುದಕ್ಕೆ ಕಾರಣ ತಿಳಿಸಲು ಪೊಲೀಸ್ ಇಲಾಖೆಯನ್ನು ಕೇಳಲು ನಿರ್ಧರಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಹಶೀಲ್ದಾರ್ ಎಂ.ಎಂ.ಗಣೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೈರು ಹಾಜರಾದರೆ ನಿರ್ಲಕ್ಷ್ಯ ಎಂದರ್ಥ-ಕೋಟ: ತಾಲೂಕು ಪಂಚಾಯಿತಿ ಸಭೆಗಳಿಗೆ ಅಧಿಕಾರಿಗಳು ಹಾಜರಾಗದೆ ಇದ್ದರೆ ಅದು ಸಭೆಗೆ ತೋರಿದ ಅಗೌರವ ಮತ್ತು ನಿರ್ಲಕ್ಷ್ಯ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೋಮವಾರ ನಡೆದ ಸಭೆಗೆ ಹಲವು ಮಂದಿ ಅಧಿಕಾರಿಗಳು ಗೈರಾಗಿದ್ದರು, ಜನಪ್ರತಿನಿಧಿಗಳ ಗೈರೂ ಗಮನ ಸೆಳೆಯಿತು. ತಾ.ಪಂ.ಉಪಾಧ್ಯಕ್ಷೆ ಸಹಿತ ಐದು ಮಂದಿ ತಾ.ಪಂ.ಸದಸ್ಯರು, ನಾಲ್ವರು ಜಿ.ಪಂ.ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.