ಪುತ್ತೂರು: ನಗರದ ಹೊರವಲಯದ ಮರೀಲ್ ಬಳಿ ಬೈಕ್ ಮತ್ತು ಪಿಕಪ್ ನಡುವೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಅರೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ರೇವಣ್ಣ (34) ಮೃತ ಯುವಕ.
ನರಿಮೊಗರು ಇಂದಿರಾ ನಗರದಲ್ಲಿನ ಪತ್ನಿ ಮನೆಯಲ್ಲಿ ವಾಸ್ತವ್ಯ ಇರುವ ರೇವಣ್ಣ ಅಲ್ಲಿಂದಲೇ ಕ್ಯಾಂಪ್ಕೋ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಸೋಮವಾರ ಎರಡನೇ ಪಾಳಿಯ ಕರ್ತವ್ಯ ಇದ್ದ ಕಾರಣ ಮಧ್ಯಾಹ್ನ ಮನೆಯಿಂದ ಬೈ ಕ್ ನಲ್ಲಿ ಬರುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಪಿಕಪ್ ಗಾಡಿಯು ಪುತ್ತೂರಿನಿಂದ ವೀರಮಂಗಲ ಕಡೆಗೆ ಹೋಗುತ್ತಿತ್ತು. ಡಿಕ್ಕಿ ಹೊಡೆದ ರಭಸದಲ್ಲಿ ಬೈಕ್ ರಸ್ತೆಗೆ ಅಪ್ಪಳಿಸಿದ್ದು, ಸವಾರ ರೇವಣ್ಣ ಅವರ ತಲೆಗೆ ಗಂಭೀರ ಏಟು ತಗುಲಿತು. ತಕ್ಷಣ ಅವರನ್ನು ಆಸ್ಪತ್ರಗೆ ಕೊಂಡೊಯ್ಯಲಾಗಿದ್ದು, ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.