ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಎಂಬಲ್ಲಿನ ಯುವಕನೋರ್ವ ವಾರದ ಹಿಂದೆ ನಡೆದ ಅಪಘಾತಕ್ಕೆ ಬಲಿಯಾಗಿದ್ದಾನೆ.
ಕಡಂದಲೆ ಹೊಸಂಗಡಿ ನಿವಾಸಿ ಪ್ರಭಾಕರ ಶೆಟ್ಟಿಯವರ ಪುತ್ರ ಪ್ರಸನ್ನ ಶೆಟ್ಟಿ(23) ಮೃತ ಯುವಕ.
ವಾರದ ಹಿಂದೆ ಈತ ತನ್ನ ಮೂವರು ಸಹೋದ್ಯೋಗಿಗಳೊಂದಿಗೆ ಸುರತ್ಕಲ್ ನಲ್ಲಿ ರಸ್ತೆಬದಿ ನಿಂತಿದ್ದಾಗ ಅತೀ ವೇಗವಾಗಿ ಬಂದ ಕಾರೊಂದು ನಾಲ್ವರಿಗೂ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಪ್ರಸನ್ನ ತೀವ್ರವಾಗಿ ಗಾಯಗೊಂಡಿದ್ದು, ಗುರುವಾರ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇತರ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಪ್ರಸನ್ನ ಶೆಟ್ಟಿ ಬಾಲ್ಯದಿಂದಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡಿದ್ದು, ಮೂಡುಬಿದಿರೆ ಕಾಲೇಜೊಂದರಲ್ಲಿ ವಿದ್ಯಾರ್ಥಿ ನಾಯಕನಾಗಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮೃದು ಸ್ವಭಾವದಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಈತನ ಅಂತ್ಯ ಸಂಸ್ಕಾರ ಶುಕ್ರವಾರ ಕಡಂದಲೆಯಲ್ಲಿ ನಡೆಯಲಿದ್ದು, ರಿಕ್ಷಾ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಲು ಊರವರು ನಿರ್ಧರಿಸಿದ್ದಾರೆ.