ಬಂಟ್ವಾಳ: ಅಜಿಲಮೊಗರು-ಕಡೇಶಿವಾಲಯ ನಡುವೆ ಸೌಹಾರ್ದ ಸೇತುವೆ ನಿರ್ಮಾಣದ ಕನಸು ಕೊನೆಗೂ ನನಸಾಗುವ ಹಂತಕ್ಕೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಫಾರಸ್ಸಿನಂತೆ 31 ಕೋಟಿ ರೂ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದ್ದು, ಕೆಆರ್ಡಿಸಿಎಲ್( ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ) ಗೆ ಸೇತುವೆ ನಿರ್ಮಾಣದ ಜವಬ್ದಾರಿ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮೂರು ವರ್ಷದೊಳಗೆ ಅಜಿಲಮೊಗರು-ಕಡೇಶೀವಾಲಯ ನಡುವೆ ಸೌಹಾರ್ದ ಸೇತುವೆ ನಿರ್ಮಾಣಗೊಳ್ಳಲಿದೆ.
ಯಾಕೆ ಸೌಹಾರ್ದ ಸೇತುವೆ..?
ಇತಿಹಾಸ ಪ್ರಸಿದ್ದ ಅಜಿಲಮೊಗರು ಹಾಗೂ ಚಿಂತಾಮಣಿ ನರಸಿಂಹ ದೇವಾಲಯವು ಸೌಹಾರ್ದ ಪ್ರತೀಕವಾಗಿ ನೇತ್ರಾವತಿ ನದಿಯ ಎರಡು ತೀರಗಳಲ್ಲಿದೆ. ಇವೆರಡರ ನಡುವೆ ಸೌಹಾರ್ದ ಸೇತುವೆ ನಿರ್ಮಾಣವಾಗಬೇಕೆಂಬುದು ಇಲ್ಲಿನ ಜನರ ಬಹುವರ್ಷಗಳ ಕನಸು. ಅಜಿಲಮೊಗರು ಮಸೀದಿ ಹಾಗೂ ಕಡೇಶಿವಾಲಯ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನವು ಪುರಾತನ ಕಾಲದಿಂದಲೂ ಪ್ರಸಿದ್ಧಿಯನ್ನು ಹೊಂದಿರುವ ಧಾರ್ಮಿಕ ಕೇಂದ್ರಗಳಾಗಿವೆ. ಈಗಲೂ ಹಲವು ಜಿಲ್ಲೆಗಳಿಂದ ಭಕ್ತರು ಈ ಎರಡೂ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಸುಮಾರು 700 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಾಲಿದಾ ಹರಕೆ ಆಚರಣೆಗೆ ಬೇರೆ ಬೇರೆ ರಾಜ್ಯಗಳಿಂದ ಜನರು ಬರುತ್ತಾರೆ. ಮೊಗರ್ನಾಡು ಮಾಗಣೆಗೆ ಸೇರಿದ ಕಡೇಶಿವಾಲಯ ನರಸಿಂಹ ಕ್ಷೇತ್ರವೆಂದು ಪ್ರಸಿದ್ಧ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಸಹಸ್ರಲಿಂಗೇಶ್ವರನೂ ನರಸಿಂಹ ಸ್ವಾಮಿಯೂ ಜೊತೆಯಾಗಿರುವರು ಎಂದು ಕ್ಷೇತ್ರಪುರಾಣ ಹೇಳುತ್ತದೆ.
ಇಲ್ಲಿಗೆ ಅಡ್ಡಲಾಗಿ ದ್ವಿಪಥ ಸೇತುವೆಯೊಂದು 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. 350 ಮೀಟರ್ ಉದ್ದದ ಈ ಸೇತುವೆಯನ್ನು ಕೆಆರ್ ಡಿಸಿಎಲ್ ನವರು ನಿರ್ಮಿಸುವರು. ಎರಡು ಧಾರ್ಮಿಕ ಕೇಂದ್ರಗಳನ್ನು ಬೆಸೆಯಲು ಸಹಕಾರಿ. ಸರಪಾಡಿ ಭಾಗವನ್ನು ಪುತ್ತೂರು ತಾಲೂಕಿಗೆ ನಿಕಟವಾಗಿಸುವ ಅವಕಾಶ ಈ ಸೇತುವೆಗೆ ಇದೆ. ಹೀಗಾಗಿ ಅಜಿಲಮೊಗರು ಮತ್ತು ಕಡೇಶಿವಾಲಯ ಬೆಸೆಯುವ ಸೇತುವೆಗೆ ದಶಕಗಳಿಂದಲೇ ಬೇಡಿಕೆ ಇತ್ತು. ಈಗ ಅದು ಈಡೇರುವ ಹಂತಕ್ಕೆ ಬಂದಿದೆ.
ಭರವಸೆಗಳ ಮಹಾಪೂರ..
ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸುವ ಪ್ರತಿಯೊಬ್ಬರೂ ಚುನಾವಣಾ ಪ್ರಚಾರದ ವೇಳೆ ಸೇತುವೆ ನಿರ್ಮಾಣ ಭರವಸೆಯನ್ನು ಕೊಡುತ್ತಲೇ ಬಂದಿದ್ದರು. ಈ ಹಿಂದೆ ವೀರಪ್ಪ ಮೊಯಿಲಿಯವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಇಲ್ಲಿನ ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ತಾಪವಾಗಿತ್ತು. ಆ ಬಳಿಕದ ದಿನಗಳಲ್ಲಿ ಇಲ್ಲಿನ ಜನತೆಯೂ ಈ ಸೇತುವೆಯ ಬಗ್ಗೆ ಕನಸು ಹೊತ್ತುಕೊಂಡಿದ್ದರೂ, ಈಡೇರಲೇ ಇಲ್ಲ. ಈ ಎಲ್ಲದರ ನಡುವೆ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೂಗು ಸೇತುವೆಗಾಗಿ 8 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿತ್ತು. ಸಂಸದರಾಗಿ ಆಯ್ಕೆಯಾದ ಬಳಿಕ ನಳಿನ್ ಕುಮಾರ್ ಕಟೀಲ್ ತನ್ನ ಅಭಿವೃದ್ದಿ ಚಟುವಟಿಕೆಯಲ್ಲಿ ಅಜಿಲಮೊಗರು-ಕಡೇಶಿವಾಲಯ ನಡುವೆ ಸೇತುವೆ ನಿರ್ಮಾಣ ಎಂದಿದ್ದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿಯವರು ಈ ಸೇತುವೆ ನಿರ್ಮಾಣಕ್ಕಾಗಿ 18 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಜೂರು ಆಗುತ್ತದೆ ಎಂದಿದ್ದರು. ಆದರೆ ಅದ್ಯಾವುದೂ ಈಡೇರಲೇ ಇಲ್ಲ. ಬಂಟ್ವಾಳದ ಶಾಸಕ ರಮಾನಾಥ ರೈ ಯವರೂ ಕೂಡ ಈ ಎರಡು ಧಾರ್ಮಿಕ ಕೇಂದ್ರಗಳ ನಡುವೆ ಸೌಹಾರ್ದ ಸೇತುವೆ ನಿರ್ಮಾಣವಾಗಬೇಕೆಂಬ ಕನಸು ಹೊತ್ತಿದ್ದರು. ಮಾತ್ರವಲ್ಲದೆ ಕಳೆದ ವರ್ಷ ಬಂಟ್ವಾಳಕ್ಕೆ ಲೋಕೋಪಯೋಗಿ ಸಚಿವ ಮಹದೇವಪ್ಪ ಆಗಮನದ ವೇಳೆ ಈ ಸೌಹಾರ್ದ ಸೇತುವೆಯ ಅಗತ್ಯತೆ ಬಗ್ಗೆ ಗಮನಸೆಳೆದಿದ್ದರು. ಅಂದು ಸಚಿವ ಮಹದೇವಪ್ಪರವರು ನೀಡಿದ್ದ ಭರವಸೆ ಇಂದು ನನಸಾಗಿದ್ದು, ರಾಜ್ಯ ಸರ್ಕಾರ ಮಣಿನಾಲ್ಕೂರು ಗ್ರಾಮದ ಅಜಿಲಮೊಗರುವಿನಿಂದ ಕಡೇಶ್ವಾಲ್ಯ ಗ್ರಾಮದ ಚಿಂತಾಮಣಿ ನರಸಿಂಹ ದೇವಸ್ಥಾನ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಸಚಿವಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಏನುಲಾಭ..?
ಅಜಿಲಮೊಗರು ದರ್ಗಾ ಹಾಗೂ ಕಡೇಶ್ವಾಲ್ಯ ದೇವಸ್ಥಾನ ಕಣ್ಣಳತೆಯ ದೂರದಲ್ಲಿ ಇದ್ದರೂ, ಅಜಿಲಮೊಗರುವಿನಿಂದ ಕಡೇಶ್ವಾಲ್ಯ ಸಂಪರ್ಕಕ್ಕೆ ಉಪ್ಪಿನಂಗಡಿ ಮಾರ್ಗವಾಗಿ ಅಥವಾ ಸರಪಾಡಿ, ಬಂಟ್ವಾಳ ಬಿ.ಸಿ.ರೋಡು ಮಾರ್ಗವಾಗಿ ಸುಮಾರು 40 ಕಿ.ಮೀ ಸುತ್ತಾಟ ನಡೆಸುತ್ತಿದ್ದಾರೆ. ಈ ಸೇತುವೆ ನಿರ್ಮಾಣವಾದಲ್ಲಿ ಸರಪಾಡಿ ಯಿಂದ ಮಾಣಿ -ಪುತ್ತೂರು ಹೋಗುವವರಿಗೆ ಮಾಣಿಯಿಂದ ಕಾರಿಂಜ, ಧರ್ಮಸ್ಥಳ ಸಂಪರ್ಕಕ್ಕೂ ಹೆಚ್ಚು ಸನಿಹದ ರಸ್ತೆ ನಿರ್ಮಾಣವಾದಂತೆ. ಅಲ್ಲದೆ ನದೀ ತಟದಲ್ಲಿರುವ ಎರಡೂ ಧಾರ್ಮಿಕ ಕೇಂದ್ರಗಳ ನಡುವೆ ಸೌಹಾರ್ದತೆಗೂ ಕಾರಣವಾಗುತ್ತದೆ.
ರೈತರಿಗೆ ಮತ್ತು ಸ್ಥಳೀಯರಿಗೆ ಕೃಷಿ ಉತ್ಪನ್ನಗಳನ್ನು ಉಪ್ಪಿನಂಗಡಿ, ಪುತ್ತೂರು ಕಡೆಗಳಿಗೆ ಕೊಂಡೊಯ್ಯಲು ಸುಲಭವಾಗುತ್ತದೆ. ಮಣಿನಾಲ್ಕೂರು, ದೇವಸ್ಯಮುಡೂರು, ಸರಪಾಡಿ, ಕಡೇಶಿವಾಲಯದ ರೈತರಿಗೆ ಕನಿಷ್ಠ 10 ರಿಂದ 15 ಕಿಲೋಮೀಟರ್ ನಷ್ಟು ಅಂತರ ಕಡಿಮೆಯಾಗುತ್ತದೆ.
ನೂತನ ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234 ಸಂಪರ್ಕ ಸಾಧ್ಯ.ಅಜಿಲಮೊಗರು ಭಾಗದ ಜನರಿಗೆ ದೊಡ್ಡ ಆಸ್ಪತ್ರೆಗಳಿಗೆ ತೆರಳಬೇಕೆಂದಿದ್ದರೆ ಬಿ.ಸಿ.ರೋಡ್ ಕಡೆಗೆ ಬರಬೇಕು. ಸೇತುವೆ ನಿರ್ಮಾಣವಾದರೆ ಪುತ್ತೂರಿಗೂ ಹೋಗುವ ಅವಕಾಶ ಇದೆ. ಇದಲ್ಲದೆ ಸಮೀಪದ ಪ್ರದೇಶಗಳಿಗೆ ತೆರಳುವವರು ಸುತ್ತು ಬಳಸಿ ಸಾಗಬೇಕಿತ್ತು.
ಸೇತುವೆ ನಿರ್ಮಾಣವಾದ ಬಳಿಕ ಹತ್ತಿರದ ರಸ್ತೆಗಳೂ ಅಭಿವೃದ್ಧಿ ಹೊಂದುವುದರಿಂದ ಯಾವುದೇ ಆತಂಕವಿಲ್ಲದೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆಯೊಳಗೆ ತಲುಪಬಹುದು. ಧಾರ್ಮಿಕ ಹಾಗೂ ಪ್ರವಾಸೋದ್ಯಮ ನಿಟ್ಟಿನಲ್ಲೂ ಈ ಭಾಗದ ಸೇತುವೆಯನ್ನು ನಿರ್ಮಿಸುವುದು ಅತೀ ಅವಶ್ಯ. ಸರಪಾಡಿ, ಮಣಿನಾಲ್ಕೂರು ಗ್ರಾಮವೂ ಅಭಿವೃದ್ಧಿಕಕ್ಷೆಯಲ್ಲಿ ಸೇರಿ ಕೊಂಡಂತಾಗುತ್ತದೆ. ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಎರಡೂ ಧಾರ್ಮಿಕ ಕೇಂದ್ರಗಳ ಪರಿಸರ, ನದಿ ತೀರ ಆಹ್ಲಾದಮಯ ವಾತಾವರಣವನ್ನು ಕಲ್ಪಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಸುತ್ತಾಡುವವರಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂದರ್ಶಕರಿಗೆ ಈ ಸೇತುವೆ ನಿರ್ಮಾಣ ಮತ್ತಷ್ಟು ಸೌಕರ್ಯ ಒದಗಿಸಿದಂತಾಗುತ್ತದೆ.
ಅಂದಾಜು ಪಟ್ಟಿ ರೆಡೀ..
ಸೇತುವೆ ನಿರ್ಮಾಣದ ಕುರಿತಾಗಿ ಲೋಕೋಪಯೋಗಿ ಇಲಾಖೆ ಕಾಮಗಾರಿಯ ರೇಖಾ ಅಂದಾಜುಪಟ್ಟಿಯನ್ನು ಕೆಆರ್ ಡಿಸಿಎಲ್ ಗೆ ಸಲ್ಲಿಸಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಈ ಸೇತುವೆಯನ್ನು ನಿರ್ಮಿಸಬೇಕು. ಸುಮಾರು 350 ಮೀ ಅಗಲದ ಸೇತುವೆ ಇದಾಗಲಿದೆ. ನದಿಗೆ ಅಡ್ಡಲಾಗಿ ದ್ವಿಪಥ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಸರಿಸುಮಾರು ಬಿ.ಸಿ.ರೋಡ್-ಪಾಣೆಮಂಗಳೂರು ಸೇತುವೆಯಂತೆ ಕಾಣಿಸಬಹುದು. ನದಿಯ ತಳಭಾಗದಿಂದ ಸುಮಾರು 10 ಮೀಟರ್ ಎತ್ತರಕ್ಕೆ ನಿರ್ಮಿಸಿದರೆ ಸೇತುವೆ ಗಟ್ಟಿಯಾಗಿ ಹಲವಾರು ವರ್ಷಗಳವರೆಗೆ ಎರಡೂ ಪ್ರದೇಶವನ್ನು ಬೆಸೆದುಕೊಂಡಿರುತ್ತದೆ.