ಉಳ್ಳಾಲ: ಆಹಾರ ಪದ್ದತಿ ಹಾಗೂ ಜೀವನ ಶೈಲಿಯನ್ನು ಕ್ರಮಬದ್ಧವಾಗಿ ರೂಢಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದ್ದು, ಕೆಲಸದ ಒತ್ತಡದಿಂದಾಗಿ ಕರ್ತವ್ಯ ನಿರತ ಪೊಲೀಸರು ಹೆಚ್ಚಾಗಿ ಸ್ಥೂಲಕಾಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತೆ ಶೃತಿ .ಎನ್.ಆರ್ ತಿಳಿಸಿದ್ದಾರೆ.
ಅವರು ವಿಶ್ವ ಕಿಡ್ನಿ ದಿನಾಚರಣೆಯ ಪ್ರಯುಕ್ತ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ನಿಯಮಿತವಾದ ವ್ಯಾಯಮ ಹಾಗೂ ಯೋಗದಿಂದ ಸ್ಥೂಲಕಾಯ ಹಾಗೂ ಬೊಜ್ಜು ಸಮಸ್ಯೆಯಿಂದ ದೇಹವನ್ನು ರಕ್ಷಿಸಬಹುದು. ಸ್ಥೂಲಕಾಯ ಸಮಸ್ಯೆ ಹೆಚ್ಚಿನ ಪ್ರಕರಣಗಳಲ್ಲಿ ನಿರ್ಲಕ್ಷ ್ಯತನದಿಂದ ಸೃಷ್ಟಿಯಾಗುತ್ತದೆ. ಸ್ಥೂಲಕಾಯಕ್ಕೆ ಒಳಗಾದ ನಂತರ ವ್ಯಥೆ ಪಡುವುದಕ್ಕಿಂತ ಮುಂಜಾಗ್ರತೆ ಅತಿ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹ ಪ್ರಾಧ್ಯಾಪಕ ಡಾ. ಮಹಮ್ಮದ್ ಎ. ವಾಣಿ ಅವರು ಜ್ಯೋತಿ ಸಂಜೀವಿನಿ ಸೇರಿದಂತೆ ಯೆನೆಪೋಯ ಆಸ್ಪತ್ರೆಯಲ್ಲಿ ಸರಕಾರಿ ನೌಕರರಿಗೆ ವಿವಿಧ ಯೋಜನೆಯಲ್ಲಿ ಚಿಕಿತ್ಸೆ ಲಭ್ಯವಿದ್ದು ದೇಶದ ಇತರ ಭಾಗದಲ್ಲಿ ಇರುವ ಚಿಕಿತ್ಸಾ ವೆಚ್ಚಕ್ಕಿಂತಲೂ ಆಧುನಿಕ ಸೌಲಭ್ಯ ಹೊಂದಿದ ಚಿಕಿತ್ಸೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸರಕಾರಿ ನೌಕರರು ಈ ಸೌಲಭ್ಯ ಪಡೆಯಬೇಕು. ಹಾಗೆಯೇ ಮೂತ್ರಪಿಂಡ ದಾನ ಮಾಡುವುದರಿಂದ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.
ಕಿಡ್ನಿಯಲ್ಲಿ ಎದುರಾಗುವ ರೋಗ ಹಾಗೂ ಸ್ಥೂಲಕಾಯ ನಿವಾರಣೆಗೆ ಎಲ್ಲರ ದೇಹದಲ್ಲಾಗುವ ನಿತ್ಯದ ಬದಲಾವಣೆ ಹಾಗೂ ನಿತ್ಯ ತಿನ್ನುವ ಆಹಾರದ ಮೇಲೆ ಹಿಡಿತ ಇಲ್ಲದಿದ್ದರೆ ಸಂಭವಿಸುವುದರಿಂದ ಆಗಾಗ್ಗೆ ಆರೋಗ್ಯದ ಬಗ್ಗೆ ತಪಾಸಣೆ ಮಾಡಿಕೊಳ್ಳುವುದು ಉತ್ತಮ ಎಂದು ಮೂತ್ರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮುಜಿಬ್ ರಹಿಮಾನ್ ಹೇಳಿದರು. ಯೇನೆಪೋಯ ಆಸ್ಪತ್ರೆಯ ಮೂತ್ರಪಿಂಡ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ್ ಪೈ ಮೂತ್ರಪಿಂಡ ಆರೈಕೆಯ ವಿವಿಧ ಅಂಶಗಳು ಹಾಗೂ ಕಿಡ್ನಿ ದಿನಾಚರಣೆಯ ಅಂಗವಾಗಿ ಆಸ್ಪತ್ರೆಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಿರುವನಂತಪುರ ಹೀರಾ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕಿ ಸುರುಮಿ ಫರ್ಹಾದ್ ಅವರು ಮೂತ್ರಪಿಂಡ ದಾನ ಒಪ್ಪಂದಕ್ಕೆ ಸಹಿ ಹಾಕಿದರು. ಯೇನೆಪೋಯ ವಿಶ್ವವಿದ್ಯಾಲಯ ಕುಲಸಚಿವ ಡಾ. ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.
ಡಾ. ಅಲ್ತಾಫ್ ಖಾನ್ ಸ್ವಾಗತಿಸಿದರು. ಜುಮಾ ರಶೀದ್ ನಿಶತ್ ಶಹಿಕ್ ಕಾರ್ಯಕ್ರಮ ನಿರೂಪಿಸಿದರು. ಯುರೋಲೊಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಿಶ್ಚಿತ್ ಡಿಸೋಜ ವಂದಿಸಿದರು.