ಕಾಸರಗೋಡು: ಅಕ್ರಮ ಮದ್ಯ ದಾಸ್ತಾನು ಕೇಂದ್ರಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಅಬಕಾರಿ ದಳದ ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹೋದರರು ಸೇರಿದಂತೆ ಐವರನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೇಕೂರು ಸುಭಾಷ್ ನಗರದ ರಾಜೇಶ್ (28), ಸಹೋದರ ಹರೀಶ್ ( 28) , ಲತೀಶ್ ( 19) , ಜೋಡುಕಲ್ಲುವಿನ ನವೀನ್ (23) , ಸೋಮಶೇಖರ (21) ಎಂದು ಗುರುತಿಸಲಾಗಿದೆ. ಇನ್ನೂ ಐದು ಮಂದಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಘಟನೆ ನಡೆದಿತ್ತು. ಬೇಕೂರು ಸುಭಾಷ್ ನಗರದ ಮನೆಯೊಂದರಲ್ಲಿ ಅಕ್ರಮ ಮದ್ಯ ದಾಸ್ತಾನು ಬಗ್ಗೆ ಮಾಹಿತಿ ತಿಳಿದ ಕುಂಬಳೆ ಅಬಕಾರಿ ದಳದ ಸಿಬಂದಿಗಳು ದಾಳಿ ನಡೆಸಿದ್ದು, ಮನೆ ಬಳಿ ದಾಸ್ತಾನಿರಿಸಿದ್ದ 12 ಬಾಕ್ಸ್ ವಿದೇಶಿ ಮದ್ಯ , 31 ಬಾಟ್ಲಿ ಮದ್ಯ ಹಾಗೂ 10 ಕಿಲೋ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಮರಳುತ್ತಿದ್ದಾಗ ತಂಡವು ಅಬಕಾರಿ ದಳದ ಸಿಬಂದಿಗಳನ್ನು ದಿಗ್ಬಂಧನದಲ್ಲಿರಿಸಿ ಹಲ್ಲೆ ನಡೆಸಿ ಅಬಕಾರಿ ದಳದ ಜೀಪಿನಲ್ಲಿರಿಸಲಾಗಿದ್ದ ಮದ್ಯವನ್ನು ತಂಡವು ಬಲವಂತವಾಗಿ ಕಸಿದು ಇನ್ನೊಂದು ವಾಹನದಲ್ಲಿ ಪರಾರಿಯಾಗಿತ್ತು. ಅಬಕಾರಿ ಇನ್ಸ್ ಪೆಕ್ಟರ್ ರಾಬಿನ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು. ತಲೆಮರೆಸಿಕೊಂಡಿರುವ ಇತರರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.