ಕಾರ್ಕಳ: ನಾಗರಹಾವು ಕಡಿಕ್ಕೊಳಗಾಗಿ ಬಜರಂಗದಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ಗಾಯಗೊಂಡಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾವಿಭಾಗದಲ್ಲಿ ದಾಖಲಾಗಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವಿಷಪೂರಿತ ಹಾವುಗಳನ್ನು ಹಿಡಿಯುವಲ್ಲಿ ಅನಿಲ್ ಪ್ರಭು ಕರಗತ ಹೊಂದಿದ್ದು, ಕೆಲ ದಿನಗಳ ಹಿಂದೆ ಮುದ್ರಾಡಿ ಪರಿಸರದಲ್ಲಿ ಕಂಡುಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಬರಿಕೈಯಲ್ಲಿ ಹಿಡಿದು ಕಾಡಿನಲ್ಲಿ ಬಂಧಮುಕ್ತಗೊಳಿಸುವ ಮೂಲಕ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವೊಂದಕ್ಕೆ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದರು. ಸೋಮವಾರ ಸಂಜೆ ಆರೈಕೆ ಮಾಡುತ್ತಿದ್ದ ಸಂದರ್ಭದಲ್ಲಿ ನಾಗರಹಾವು ಕಡಿದು ಗಾಯಗೊಳಿಸಿದೆ. ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಜ್ರಿಯಾ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗಿದೆ.
ಕಹಿ ಘಟನೆ ಮಾಸುವ ಮುನ್ನ…
ಕಾರ್ಕಳ ಪೆರ್ವಾಜೆಯ ಗೋಪಾಲ ಅಂಚನ್ ಎಂಬವರು ಯಾವುದೇ ಪ್ರಭೇದಗಳ ಹಾವುಗಳನ್ನು ಹಿಡಿಯುವುದಲ್ಲಿ ನಿಸ್ಸೀಮರೆನ್ನಿಸಿದ್ದರು. ಯಾವುದೇ ಸಂದರ್ಭದಲ್ಲಿ ನಾಗರಿಕರ ಕರೆ ಮೇರೆಗೆ ಅಲ್ಲಿಗೆ ತೆರಳಿ ವಿಷಪೂರಿತ ಹಾವುಗಳನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟು ಬರುತ್ತಿದ್ದರು. ಅಗತ್ಯ ಸಂದರ್ಭದಲ್ಲಿ ಅದಕ್ಕೆ ಆರೈಕೆ ಮಾಡುತ್ತಿದ್ದರು. ಕಳೆದ ತಿಂಗಳ ಹಿಂದೆ ಬೈಲೂರು ಪರಿಸರದಲ್ಲಿ ಮನೆಯೊಂದರ ಒಳ ಪ್ರವೇಶಿಸಿ ನಾಗರ ಹಾವನ್ನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಅದು ಕಡಿದು ಗಾಯಗೊಳಿಸಿತು. ಹಾವಿನ ಕಡಿತವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿದ ಅವರು ಮನೆಗೆ ಹಿಂತಿರುಗುತ್ತಿದ್ದಂತೆ ಅಲ್ಲಿಯೇ ಕುಸಿದು ಬಿದ್ದು ದೇಹ ತ್ಯಾಗ ಮಾಡಿದ್ದರು.