ಕೊಣಾಜೆ: ಕೊಣಾಜೆಯ ಮಂಗಳೂರು ವಿವಿ ಬಳಿ ತಾಂತ್ರಿಕ ತೊಂದರೆಯಿಂದ ರಾತ್ರಿಯ ವೇಳೆ ರಸ್ತೆಗೆ ತಾಗಿಕೊಂಡೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯೊಂದಕ್ಕೆ ಆಕ್ಟಿವಾ ಹೊಂಡ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವಕನೊರ್ವ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಕೊಣಾಜೆ ಗ್ರಾಮದ ನಡುಪದವು ಕುಂಟಾಲಗುಳಿಯ ದಿ.ಅಮ್ಮುಗೌಡ ಎಂಬವರ ಪುತ್ರ ಶೇಖರ(23) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಶೇಖರ ಮಾ.7ರಂದು ರಾತ್ರಿ 10.30ಕ್ಕೆ ಎಂದಿನಂತೆ ಕೆಲಸ ಮುಗಿಸಿ ಮನೆಯ ಕಡೆಗೆ ಹೊರಟಿದ್ದ. ಗೆಳೆಯನ ಆಕ್ಟಿವಾ ಹೊಂಡಾದಲ್ಲಿ ದೇರಳಕಟ್ಟೆಯಿಂದ ಕೊಣಾಜೆ ಕಡೆಗೆ ಸಂಚರಿಸುತ್ತಿದ್ದಾಗ ಕೊಣಾಜೆ ಮಂಗಳೂರು ವಿವಿಯ ಮುಖ್ಯ ದ್ವಾರದ ಬಳಿ ತಾಂತ್ರಿಕ ತೊಂದರೆಯಿಂದಾಗಿ ಟಿಪ್ಪರ್ ಲಾರಿಯೊಂದು ರಸ್ತೆಗೆ ತಾಗಿಕೊಂಡೇ ನಿಂತುಕೊಂಡಿತ್ತು. ಆದರೆ ರಾತ್ರಿಯ ವೇಳೆಯಾಗಿದ್ದರಿಂದ ಟಿಪ್ಪರ್ ಲಾರಿಯು ನಿಂತಿದ್ದು ಅರಿವಾಗದೆ ಆಕ್ಟಿವಾ ಹೊಂಡಾ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಶೇಖರ್ನ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಬಳಿಕ ಸ್ಥಳೀಯರು ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ.
ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ: ಶೇಖರ್ ಅವರ ತಂದೆ ಅಮ್ಮುಗೌಡ ಅವರು ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ನಿಧನರಾಗಿದ್ದರು. ಬಳಿಕ ತಾಯಿ ಹಾಗೂ ಸಹೋದರಿಯನ್ನು ಸಾಕುವ ಜವಬ್ಧಾರಿ ಶೇಖರನ ಹೆಗಲ ಮೇಲೆ ಬಿದ್ದಿತ್ತು. ಬಳಿಕ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಸೆಂಟ್ರಿಂಗ್ ಕೆಲಸಕ್ಕೆ ಸೇರಿದ್ದ. ಇತ್ತೀಚೆಗೆ ದೇರಳಕಟ್ಟೆಯ ಆಸ್ಪತ್ರೆಯ ಕ್ಯಾಂಟಿನ್ ಗೆ ಕೆಲಸಕ್ಕೆ ಸೇರಿ ಕುಟುಂಬಕ್ಕೆ ಆಸರೆಯಾಗಿದ್ದ. ಆದರೆ ವಿಧಿಯ ಲೀಲೆ ಎಂಬಂತೆ ಶೇಖರನಿಗೆ ಟಿಪ್ಪರ್ ಲಾರಿಯು ಯುಮರೂಪಿಯಾಗಿ ಆತನನ್ನು ಬಲಿ ಪಡೆದುಕೊಂಡಿದೆ. ಇದೀಗ ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿ ಹಾಗೂ ಆತನ ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸ್ವಂತ ಆಕ್ವಿವಾ ಹೋಂಡ ಮನೆಯಲ್ಲೇ ಬಿಟ್ಟಿದ್ದ: ಕಳೆದ ಮೂರು ತಿಂಗಳ ಹಿಂದೆಯಷ್ಟೇ ಶೇಖರ ಹೊಸ ಆಕ್ಟಿವಾ ಹೋಂಡ ಖರೀದಿಸಿದ್ದ. ಆದರೆ ಅಪಘಾತ ಸಂಭವಿಸಿದ ದಿನ ತನ್ನ ವಾಹನವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದ. ಕೆಲಸ ಮುಗಿಸಿ ವಾಪಸ್ಸು ಬರುವಾಗ ತನ್ನ ಸ್ನೇಹಿತನ ಆಕ್ಟಿವಾ ವಾಹನದ ಮೂಲಕ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ.