ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಹಾಗೂ ದಿವಂಗತ ಉಪಕುಲಪತಿಗಳ ಪುತ್ರಿಯೋರ್ವರು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಪ್ರಯಾಣ ಬೆಳೆಸಿದ್ದು, 37ನೇ ದಿನವಾದ ಶುಕ್ರವಾರ ಮಂಗಳೂರು ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಮಾರ್ಗವಾಗಿ ಕೇರಳದ ಕಡೆ ಪ್ರಯಾಣ ಬೆಳೆಸಿದರು. ಲಿಂಗ ಸಮಾನತೆ ಮತ್ತು ಹದಿಹರೆಯದವರಿಗೆ ಜೀವನ ಕೌಶಲ್ಯ ಶಿಕ್ಷಣದ ಉದ್ದೇಶವನ್ನಿಟ್ಟುಕೊಂಡು ಸೈಕಲ್ ಜಾಥಾ ಆರಂಭಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾಗಿದ್ದ ದಿ.ಶಿವಶಂಕರ ಮೂರ್ತಿ ಇವರ ಪುತ್ರಿಯಾಗಿರುವ ಮೈಸೂರು ಮೂಲದ 27ರ ಹರೆಯದ ಶ್ರುತಿ ಸೈಕಲ್ ಜಾಥಾ ನಡೆಸುತ್ತಿರುವವರು. ಫೆ.8 ರಂದು ಜಮ್ಮು ಕಾಶ್ಮೀರದಿಂದ ಸೈಕಲ್ ಪ್ರಯಾಣ ಆರಂಭಿಸಿರುವ ಶ್ರುತಿ ಈವರೆಗೆ 3,000 ಕ್ಕೂ ಅಧಿಕ ಕಿ.ಮೀ.ನಷ್ಟು ಕ್ರಮಿಸಿ 11 ರಾಜ್ಯಗಳನ್ನು ದಾಟಿ ಇದೀಗ ಕರ್ನಾಟಕದ ಗಡಿಯನ್ನು ದಾಟಿ ಕೇರಳವನ್ನು ತಲುಪಿದ್ದಾರೆ.
ಮೂಲತ: ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಶ್ರುತಿ ಮೂರು ವರ್ಷ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕೆಲಸ ಮಾಡಿ ವೃತ್ತಿಯನ್ನು ಬಿಟ್ಟು ಹದಿಹರೆಯದ ಮಕ್ಕಳ ವಿಷಯದಲ್ಲಿ ಫೆಲೋಶಿಪ್ ಪಡೆದು ಜೀವನ ಕೌಶಲ್ಯ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತೊಕ್ಕೊಟ್ಟಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಸೈಕ್ಲಿಂಗ್ ಹವ್ಯಾಸವನ್ನು ಪ್ರಾರಂಭಿಸಿದ್ದೆ, ಎರಡು ಮೂರು ದಿನಗಳ ಸೈಕ್ಲಿಂಗ್ ಈ ಹಿಂದೆಯೂ ಮಾಡಿದ್ದೆ. ಈ ಬಾರಿ ಒಂದು ಲಿಂಗ ಸಮಾನತೆಯ ವಿಚಾರವನ್ನು ಪ್ರಮುಖ ಧ್ಯೇಯ ವಾಕ್ಯವನ್ನಾಗಿ ಇಟ್ಟುಕೊಂಡು ಕಾಶ್ಮೀರ್ ಟು ಕನ್ಯಾಕುಮಾರಿ ಪ್ರಯಾಣ ಬೆಳೆಸಿದ್ದೇನೆ. ಈ ನಡುವೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 48 ದಿನಗಳಲ್ಲಿ 4500 ಕಿ.ಮೀ ಸೈಕ್ಲಿಂಗ್ ಮಾಡುವ ಗುರಿಯೊಂದಿಗೆ ಹೊರಟಿದ್ದು, ದಾರಿಯಲ್ಲಿ ಸಿಗುವ ಸರಕಾರಿ ಶಾಲೆಗಳಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ನಡೆಸಿದ್ದು, ಕಳೆದ 36 ದಿನಗಳ ಸೈಕ್ಲಿಂಗ್ ಸಮಯದಲ್ಲಿ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ಸೈಕ್ಲಿಂಗ್ ಸಮಯದಲ್ಲಿ ಎಲ್ಲಾ ಕಡೆ ಉತ್ತಮ ಬೆಂಬಲ ಸಿಕ್ಕಿತ್ತು. ಕಾಶ್ಮೀರದಿಂದ ಗೋವಾವರಗೆ ತನ್ನಿಬ್ಬರು ಸ್ನೇಹಿತರು ಸ್ಕಾರ್ಪಿಯೋ ಮೂಲಕ ಬೆಂಗಾವಲಾಗಿ ಬಂದಿದ್ದರು. ಗೋವಾದಿಂದ ಕನ್ಯಾಕುಮಾರಿಯವರೆಗೆ ಏಕಾಂಗಿಯಾಗಿ ಸೈಕ್ಲಿಂಗ್ ನಡೆಸುವ ಯೋಜನೆ ಹಾಕಿದ್ದು ಮಾ. 27ಕ್ಕೆ ಕನ್ಯಾಕುಮಾರಿ ತಲುಪುವ ಗುರಿಯನ್ನು ಹೊಂದಿದ್ದೇನೆ ಎಂದರು.
ಮನೆಯಲ್ಲಿ ಬೆಂಬಲ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿಯಾಗಿದ್ದ ದಿ.ಶಿವಶಂಕರ ಮೂರ್ತಿ ಅವರ ಪುತ್ರಿಯಾಗಿರುವ ಶ್ರುತಿ ಅವರು ಸೈಕ್ಲಿಂಗ್ ವಿಚಾರವನ್ನು ತಾಯಿ, ಅಕ್ಕ ಮತ್ತು ಅಣ್ಣನಲ್ಲಿ ತಿಳಿಸಿದಾಗ ಮೊದಲು ಅವಕಾಶ ನೀಡಿರಲಿಲ್ಲ. ಬಳಿಕ ಸೈಕ್ಲಿಂಗ್ ನಡೆಸಲು ಅನುಮತಿ ನೀಡಿದರು ಎನ್ನುವ ಅವರು ಕಳೆದ 36 ದಿನಗಳ ಸೈಕ್ಲಿಂಗ್ ನಲ್ಲಿ ಹವಾಮಾನ ಬದಲಾವಣೆ, ಆಹಾರ ವ್ಯತ್ಯಾಸ ಸ್ವಲ್ಪ ಸಮಸ್ಯೆಯಾದರು ಎಲ್ಲಾ ಕಡೆ ಜನರು ಸಹಕಾರ ನೀಡಿದರು ಎಂದು ತಿಳಿಸಿದರು.
ದಿನದಲ್ಲಿ 8 ಗಂಟೆಯ ಸೈಕ್ಲಿಂಗ್: ಬೆಳಿಗ್ಗೆ 6 ಗಂಟೆಯಿಂದ ಸೈಕ್ಲಿಂಗ್ ಆರಂಭಿಸುವ ಶ್ರುತಿ ಸಂಜೆ 6ರ ವರೆಗೆ ಸೈಕ್ಲಿಂಗ್ ನಡೆಸುತ್ತಾರೆ. ದಾರಿಯಲ್ಲಿ ಸಿಗುವ ಸರಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಎರಡು ಗಂಟೆ ವ್ಯಯಿಸಿ, ಎರಡು ಗಂಟೆಯ ಕಾಲ ಆಹಾರ ವಿಶ್ರಾಂತಿಗೆ ಬಳಸುತ್ತಾರೆ. ಉಳಿದ 8 ಗಂಟೆಗಳ ಕಾಲ ನಿರಂತರವಾಗಿ ಸೈಕಲ್ ತುಳಿಯುತ್ತಲೇ ದಾರಿಯನ್ನು ಮುಂದುವರಿಸುತ್ತಿದ್ದಾರೆ.
ಭದ್ರತೆಗೆ ವಿವಿಧ ವಸ್ತುಗಳ ಬಳಕೆ: ಶ್ರುತಿ ಹದಿಹರೆಯದ ಯುವತಿಯಾಗಿರುವುದರಿಂದ ಬಹಳ ಉತ್ಸಾಹದಿಂದಲೇ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ. ತಮ್ಮ ಸುರಕ್ಷತೆಗೆ ಪೆಪ್ಪರ್ ಸ್ಪ್ರೇ, ಮೊಬೈಲ್ ಆ್ಯಪ್, ಪಿನ್ ಮೊದಲಾದ ಸೊತ್ತುಗಳನ್ನು ಬ್ಯಾಗಿನಲ್ಲಿಟ್ಟುಕೊಂಡೇ ಪ್ರಯಾಣ ಮುಂದುವರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇಷ್ಟು ದಿನಗಳಲ್ಲಿ ಎಲ್ಲಾ ಭಾಗದ ಜನ ಉತ್ತಮವಾಗಿ ಸಹಕರಿಸಿದ್ದಾರೆ. ಯಾರಿಂದಲೂ ತೊಂದರೆಯೂ ಆಗಿಲ್ಲ ಎಂದು ಶ್ರುತಿ ಹೇಳುತ್ತಾರೆ.