ಬಂಟ್ವಾಳ: ಸಿಡಿಮದ್ದು ತಯಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸ್ಪೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ವಿಟ್ಲ ಸಮೀಪದ ಕಂಬಳಬೆಟ್ಟು ನೂಜಿ ಎಂಬಲ್ಲಿ ನಡೆದಿದೆ.
ಕಂಬಳಬೆಟ್ಟು ಶಾಂತಿನಗರ ನಿವಾಸಿ ಗಫೂರ್ ಹಾಗೂ ರಫೀಕ್ ಎಂಬವರಿಗೆ ಸೇರಿದ ಸಿಡಿಮದ್ದು ತಯಾರಕಾ ಘಟಕದಲ್ಲಿ ಈ ದುರ್ಘಟನೆ ನಡೆದಿದೆ . ಮೃತಪಟ್ಟವರನ್ನು ಇಲ್ಲಿನ ರಫೀಕ್ ರ ಸಂಬಂಧಿ ಹಾಶಿಮ್ (25) ಮತ್ತು ಘಟಕದ ಕೂಲಿಕಾರ್ಮಿಕ ಕಂಬಳಬೆಟ್ಟು ನೂಜಿ ನಿವಾಸಿ ಸುಂದರ್ ಪೂಜಾರಿ (39) ಎಂದು ಗುರುತಿಸಲಾಗಿದೆ.
ಘಟನೆಯ ತೀವ್ರತೆಗೆ ಎರಡು ಮೃತದೇಹಗಳು ಛಿದ್ರಛಿದ್ರವಾಗಿದ್ದು, ಒಂದು ಮೃತದೇಹ ಪಕ್ಕದ ವಿನೋದ್ ಪೂಜಾರಿ ಎಂಬವರ ಮನೆಯಿಂದಾಚೆ ಎಸೆಯಲ್ಪಟ್ಟಿದ್ದರೆ, ಹಾಶಿಮ್ ಮೃತದೇಹ ಮನೆಯ ಮೇಲ್ಛಾವಣಿಗೆ ಎಸೆಯಲ್ಪಟ್ಟಿತ್ತು. ಘಟನೆಯಲ್ಲಿ ವಿನೋದ್ ಪೂಜಾರಿಯವರ ಸಹೋದರಿ ಹಾಗೂ ರಫೀಕ್ ಮನೆಯಲ್ಲಿದ್ದ ಮಹಿಳೆಯೊಬ್ಬರಿಗೂ ಗಾಯಗಳಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಛಿದ್ರಗೊಂಡಿದ್ದು, ಸುಮಾರು 20 ಮೀಟರ್ ದೂರದವರೆಗೂ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಹತ್ತಿರದ ವಿನೋದ್ ಪೂಜಾರಿ, ಎಂಬವರ ಮನೆಗೂ ಭಾಗಶಃ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಇದೇ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರುಮಂದಿ ಹತ್ತು ನಿಮಿಷದ ಮುಂಚೆಯಷ್ಟೇ ಸ್ಥಳದಿಂದ ತೆರಳಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲೇ ನಾಡಬಾಂಬು ತಯಾರಿಕೆಯ ಅವಶೇಷಗಳು ಪತ್ತೆಯಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಕುಟುಂಬ ಕಳೆದ 42 ವರ್ಷಗಳಿಂದ ಅವಿಭಜಿತ ದ.ಕ.ಜಿಲ್ಲೆ ಹಾಗೂ ಕೇರಳದ ಎಲ್ಲಾ ಸಮಾರಂಭಗಳಿಗೂ ಇಲ್ಲಿಂದಲೇ ಪಟಾಕಿಗಳು ರವಾನೆಯಾಗುತ್ತಿದ್ದು, ಗಫೂರ್ ಹಾಗೂ ರಫೀಕ್ ರ ತಂದೆ ಗರ್ನಲ್ ಸಾಹೇಬರು ಎಂದೇ ಪ್ರಸಿದ್ದರಾಗಿದ್ದರು.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ, ಡಿವೈಎಸ್ಪಿ ರವೀಶ್ ಸಿ.ಆರ್, ಸಿಐ.ಬಿ.ಕೆ.ಮಂಜಯ್ಯ, ವಿಟ್ಲ ಠಾಣಾಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಯುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಲ್ಲಿ ಸಿಡಿಮದ್ದು ತಯಾರಿಕೆಯಾಗುತ್ತಿದ್ದರೂ ಕೆಲ ವರ್ಷಗಳಿಂದ ಇಲ್ಲಿ ಸಿಡಿಮದ್ದು ತಯಾರಿಕಾ ಪರವಾನಿಗೆಯನ್ನು ನವೀಕರಣ ಗೊಳ್ಳದೆ ಅಕ್ರಮ ಘಟಕ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಬಗ್ಗೆಯೂ ತನಿಖೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮೊದಲಾದವರು ಭೇಟಿ ನೀಡಿದ್ದಾರೆ.
ಕೇಳಿತು ಭಾರೀ ಸದ್ದು..!
ಸಂಜೆ ಆರು ಗಂಟೆಯ ವೇಳೆಗೆ ಈ ಭಾರೀ ಸ್ಫೋಟ ಉಂಟಾಗಿದ್ದು, ಸ್ಪೋಟದ ತೀವ್ರತೆಗೆ 5 ಕಿ.ಮೀ ವ್ಯಾಪ್ತಿಗೂ ಕೇಳಿ ಶಬ್ದಕ್ಕೆ ಜನತೆ ಬೆಚ್ಚಿಬಿದ್ದಿದೆ. ಘಟನಾ ಸ್ಥಳದಿಂದ ಆಸುಪಾಸಿನಲ್ಲಿರುವ 500 ಮೀಟರ್ ದೂರದ ಮನೆಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಪ್ರಾಣಿಗಳು ಭಯಭೀತವಾಗಿದೆ.
ನಾಲ್ವರು ಬಚಾವ್..
ಇದೇ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಲ್ಕುಮಂದಿ ಸ್ಥಳೀಯ ಕಾರ್ಮಿಕರು 5.50 ಸುಮಾರಿಗೆ ಸ್ಥಳದಿಂದ ನಿರ್ಗಮಿಸಿದ್ದರು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.