ಕಾಸರಗೋಡು: ಮದ್ರಸ ಶಿಕ್ಷಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ಕಾಸರಗೋಡು ಕೇಳುಗುಡ್ಡೆಯ ಎಸ್ ನಿತಿನ್ ರಾವ್ ( 18), ಸಣ್ಣ ಕೂಡ್ಲುವಿನ ಎನ್ ಅಖಿಲೇಶ್ ( 25) ಕೇಳುಗುಡ್ಡೆ ಅಯ್ಯಪ್ಪನಗರದ ಅಜೇಶ್ ಯಾನೆ ಅಪ್ಪು ( 20) ಎಂದು ಗುರುತಿಸಲಾಗಿದೆ. ಕೊಲೆಗೆ ಬಳಸಿದ ಮಾರಕಾಯುಧ ಮತ್ತು ಬೈಕ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಶುಕ್ರವಾರ ಮಧ್ಯಾಹ್ನ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು , 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಜೇಶ್ ಮತ್ತು ನಿತಿನ್ ರಾವ್ ಕೂಲಿ ಕಾರ್ಮಿಕರಾಗಿದ್ದು , ಅಖಿಲೇಶ್ ಬ್ಯಾ೦ಕ್ ವೊಂದರಲ್ಲಿ ಕೆಲಸಕ್ಕಿದ್ದನೆನ್ನಲಾಗಿದೆ. ಇವರು ಮೂವರು ಮಾತ್ರ ಪ್ರಕರಣದಲ್ಲಿ ನೇರವಾಗಿ ಶಾಮೀಲಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 20 ರಂದು ತಡರಾತ್ರಿ ಕೊಲೆ ನಡೆದಿತ್ತು . ಹಳೆ ಚೂರಿಯ ಮದ್ರಸ ಶಿಕ್ಷಕ ಮಡಿಕೇರಿಯ ರಿಯಾಜ್ (34) ರವರನ್ನು ಕೊಲೆಗೈಯ್ಯಲಾಗಿತ್ತು. ಕೊಲೆ ಬಳಿಕ ಅಜೇಶ್ ಮತ್ತು ನಿತಿನ್ ಊರಿನಿಂದ ನಾಪತ್ತೆಯಾಗಿದ್ದರು. ಅಖಿಲೇಶ್ ಕೆಲಸಕ್ಕೆ ತೆರಳಿದ್ದನು. ತನಿಖಾ ತಂಡವು ಈ ಹಿಂದೆ ಕೊಲೆ ಹಾಗೂ ಅಪರಾಧ ಪ್ರಕರಣಗಳಲ್ಲಿ ಶಾಮೀಲಾದವರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಇವರೆಲ್ಲಾ ಊರಿನಲ್ಲಿ ಇರುವುದಾಗಿ ಮಾಹಿತಿ ಲಭಿಸಿತು. ಈ ನಡುವೆ ಅಜೇಶ್ ಮತ್ತು ನಿತಿನ್ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಯಿತು. ಇವರ ಬೆನ್ನಟ್ಟಿ ತನಿಖೆ ನಡೆಸಿದ ಪೊಲೀಸರು ಕಾಸರಗೋಡು ಪರಿಸರದಿಂದ ಆರೋಪಿಗಳ ನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಮದ್ರಸ ಅಧ್ಯಾಪಕನ ಕೊಲೆ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೇ ಸಂಚಲನ ಮೂಡಿಸಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಗಲಭೆಗೂ ಸಂಚು ನಡೆದಿತ್ತು ಎಂಬ ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ರಾಜ್ಯ ಗೃಹ ಇಲಾಖೆ ಮರುದಿನವೇ ಐಜಿಪಿಯವರ ಮೇಲುಸ್ತುವಾರಿಯಲ್ಲಿ ಕಣ್ಣೂರು ಅಪರಾಧ ಪತ್ತೆದಳದ ಎಸ್ ಪಿ ಎ . ಶ್ರೀನಿವಾಸ್ ನೇತೃತ್ವದ ವಿಶೇಷ ತಂಡವನ್ನು ರಚಿಸಿತ್ತು.
ತನಿಖಾ ತಂಡವು ದಿನಗಳ ಅವಧಿಯಲ್ಲೇ ಆರೋಪಿಗಳನ್ನು ಬಂಧಿಸುವ ಮೂಲಕ ಶ್ಲಾಘನೆಗೆ ಕಾರಣಾವಾಗಿದೆ.