ಮೂಡುಬಿದಿರೆ: ಶಾಸಕ ಅಭಯಚಂದ್ರ ಜೈನ್ ಮತ್ತು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ವಾಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರ ಮೊಬೈಲ್ ವ್ಯಕ್ತಿಯೊಬ್ಬ ಕರೆ ಮಾಡಿ ಶಾಸಕ ಅಭಯಚಂದ್ರ ಮತ್ತು ಮಿಥುನ್ ರೈಗೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ‘ಎಪ್ರಿಲ್ 5ಕ್ಕೆ ಈದು ಜಾತ್ರೆ ಇದೆ, ಅಭಯಚಂದ್ರ, ಮಿಥುನ್ ರೈ ಅಲ್ಲದೆ ನಿಮ್ಮ ಕಾಂಗ್ರೆಸ್ಸಿನ ಎಷ್ಟು ಜನ ಬಂದರು ಅವರೆಲ್ಲರನ್ನು ನೋಡಿಕೊಳ್ಳುತ್ತೇನೆ’ ಎಂದು ಮೊಬೈಲ್ ನಲ್ಲಿ ಧಮ್ಕಿ ಹಾಕಲಾಗಿದ್ದು ಸುಮಾರು ನಾಲ್ಕು ಮಂದಿ ಮೊಬೈಲ್ ಲೌಡ್ ಸ್ಪೀಕರ್ ಇಟ್ಟು ಈ ರೀತಿ ಬೆದರಿಕೆಯೊಡ್ಡಿದ್ದಾರೆ ಎಂದು ಅರುಣ್ ಶೆಟ್ಟಿ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಪೈಕಿ ಈದು ಗ್ರಾಮದ ಸಚಿನ್ ಶೆಟ್ಟಿ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ದರೆಗುಡ್ಡೆಯಲ್ಲಿ ರಸ್ತೆ ಉದ್ಘಾಟನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ದೃಶ್ಯವನ್ನು ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿದಕ್ಕೆ ಕಾಂಗ್ರೆಸ್ ನ ಅರುಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದು ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರಿಗೆ ಬೆದರಿಕೆಯೊಡ್ಡಲು ಕಾರಣ ಎನ್ನಲಾಗಿದೆ.