ಕಾಸರಗೋಡು: ನಗರ ಹೊರ ವಲಯದ ಕಾಲನಿ ಪರಿಸರದ ಪೊದೆಯೊಂದರಲ್ಲಿ ಭಾರೀ ಪ್ರಮಾಣದ ಮಾರಕಾಸ್ತ್ರಗಳು ಪತ್ತೆಯಾಗಿದೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಘಟನಾ ಸ್ಥಳಕ್ಕೆ ದಾಳಿ ನಡೆಸಿದ್ದು, ತಲವಾರು, ಮಚ್ಚು, ಕಬ್ಬಿಣದ ರಾಡ್, ದೊಣ್ಣೆಗಳು, ಮರದ ತುಂಡು, ಮದ್ಯ, ಬಿಯರ್ ಬಾಟಲಿಗಳು, ಪಾತ್ರೆಗಳು ಮೊದಲಾದವು ಪತ್ತೆಯಾಗಿದೆ. ಕಂಬಾರ್ ಪೆರಿಯಡ್ಕದ ಖಾಸಗಿ ವ್ಯಕ್ತಿಯೋರ್ವರ ಸ್ಥಳದಲ್ಲಿ ಶನಿವಾರ ಮಧ್ಯಾಹ್ನ ಮಾರಕಾಯುಧಗಳು ಪತ್ತೆಯಾಗಿದೆ. ಗಲಭೆ ನಡೆಸಲು ವ್ಯವಸ್ಥಿತವಾಗಿ ಸಂಚು ನಡೆಸಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಂಡವು ಒಂದು ರಾತ್ರಿ ಈ ಕಾಡಿನಲ್ಲಿ ತಂಗಿದ್ದು, ಗಲಭೆ ಸ್ಪೋಟಿಸದ್ದಲ್ಲಿ ಪ್ರತಿಕಾರವಾಗಿ ಮಾರಕಾಸ್ತ್ರಹಾಗೂ ಇತರ ಸಾಮಾಗ್ರಿಗಳನ್ನು ದಾಸ್ತಾನಿರಿಸಿತ್ತು. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಗಲಭೆಗೆ ತಂಡವು ಹೊಂಚು ಹಾಕಿತ್ತು ಎಂಬ ಆತಂಕಕಾರಿ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆದರೆ ತಂಡವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕಾಸರಗೋಡು ಪರಿಸರದ ಕೆಲ ಕಾಲನಿ ಹಾಗೂ ಇತರ ಕೇಂದ್ರಗಳನ್ನು ಕೇಂದ್ರೀಕರಿಸಿ ದುಷ್ಕ್ರತ್ಯಕ್ಕೆ ಸಂಚು ನಡೆಸಲಾಗುತ್ತಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದೆ. ಇದರ ಬೆನ್ನಿಗೆ ಮಾರಾಕಾಸ್ತ್ರ ಪತ್ತೆಯಾಗಿರುವುದು ಸಾಕಷ್ಟು ಸಂಶಯಕ್ಕೂ ಕಾರಣವಾಗಿದೆ.
ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಬ್ದುಲ್ ರಹೀಮ್ ನೇತೃತ್ವದ ಪೊಲೀಸ್ ತಂಡ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ತಂಡದವರಿಗಾಗಿ ಶೋಧ ನಡೆಸುತ್ತಿದ್ದಾರೆ.