ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ ಗಟ್ಟೆ ಜಂಕ್ಷನ್ ನಲ್ಲಿ ಮೂಡುಬಿದಿರೆ ನಾಡಕಚೇರಿಯಲ್ಲಿ ಸರ್ವೇಯರ್ ಚಂದ್ರಕುಮಾರ್ ಎಂಬವರು ವಾಸವಿದ್ದ ಬಾಡಿಗೆ ಮನೆಗೆ ಭಾನುವಾರ ರಾತ್ರಿ ನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣವನ್ನು ಕಳವುಗೈದಿದ್ದಾರೆ.
ಮನೆಯ ಹಾಲ್ ನಲ್ಲಿ ಚಂದ್ರಕುಮಾರ್ ಹಾಗೂ ಅವರ ಪತ್ನಿ ಲಕ್ಷ್ಮೀ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಸುಳಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮನೆಯ ಕಪಾಟಿನಲ್ಲಿದ್ದ ಸುಮಾರು 2 ಲಕ್ಷ ಮೌಲ್ಯದ 60 ಗ್ರಾಮ್ ಚಿನ್ನ ಹಾಗೂ 7 ಸಾವಿರ ನಗದನ್ನು ಕದ್ದಿರುವ ಕಳ್ಳರು ಇದೇ ಪರಿಸರದ ಇನ್ನೂ ಎರಡು ಮನೆಗಳಿಗೆ ನುಗ್ಗಿದ್ದಾರೆ. ಆದರೆ ಉಳಿದ ಎರಡೂ ಮನೆಗಳಲ್ಲಿ ಯಾವುದೇ ವಸ್ತುಗಳನ್ನು ಕಳವುಗೈದಿಲ್ಲ.
ಕಳ್ಳರು ಚಂದ್ರಕುಮಾರ್ ಅವರ ಮನೆಯೊಳಗೆ ಮನೆಯ ಹಿಂದಿನ ಬದಿಯಲ್ಲಿರುವ ಅಡುಗೆ ಕೋಣೆಯ ಮೂಲಕ ಒಳಪ್ರವೇಶಿಸಿರುವ ಶಂಕೆ ಇದ್ದರೂ ಅಲ್ಲಿ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಅಡುಗೆ ಕೋಣೆಯ ಮೇಲ್ಬಾಗದಲ್ಲಿ ಎಕ್ಸಾಸ್ಟ್ ಫ್ಯಾನ್ ಗೆಂದು ಕಿಂಡಿಯೊಂದನ್ನು ಬಿಡಲಾಗಿತ್ತು. ಆದರೆ ಅಲ್ಲಿ ಫ್ಯಾನ್ ಸಿಕ್ಕಿಸದೇ ಬಿಟ್ಟಿದ್ದರಿಂದ ಕಳ್ಳರಿಗೆ ಅದೇ ರಹದಾರಿಯಾಗಿರುವ ಸಾಧ್ಯತೆಗಳಿವೆ.
ತಡರಾತ್ರಿ ಹೊತ್ತಿನಲ್ಲಿ ಚಂದ್ರಕುಮಾರ್ ಅವರು ಎಚ್ಚರವಾದಾಗ ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿ ಹೋಗಿಯಾಗಿತ್ತು. ಒಳಕೋಣೆಯಲ್ಲಿದ್ದ ಕಪಾಟಿನ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಒಳಗಿದ್ದ ಬಟ್ಟೆ ಹಾಗೂ ಆಭರಣಗಳ ಪೆಟ್ಟಿಗೆಗಳು ಹಾಗೂ ಇನ್ನಿತರ ದಾಖಲೆ ಪತ್ರಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಕಳ್ಳತನ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಸರ್ವೇಯರ್ ಚಂದ್ರಕುಮಾರ್ ಕಳ್ಳರು ಹಾಲ್ ನಲ್ಲಿ ಮಲಗಿದ್ದ ನಮಗೆ ಪ್ರಜ್ಞೆ ತಪ್ಪಿಸುವ ಯಾವುದಾದರೂ ರಾಸಾಯನಿಕ ಬಳಸಿರುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ನಮಗೆ ಎಚ್ಚರಿಕೆಯಾಗುತ್ತಿತ್ತು ಎಂದಿದ್ದಾರೆ. ಸ್ಥಳಕ್ಕೆ ಮೂಡುಬಿದಿರೆ ಎಸ್ಐ ದೇಜಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.