ಸುಳ್ಯ: ಸುಳ್ಯ ತಾಲೂಕಿನ ಮರ್ಕಂಜ-ಅರಂತೋಡು ಗ್ರಾಮಗಳ ಗಡಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕುಡಿಯುವ ನೀರಿನ ಪೈಪ್ಗ ಗಳನ್ನು ಕಡಿದು ತುಂಡರಿಸಿದ ಕಾರಣ ನೀರಿನ ಸರಬರಾಜು ಕಡಿತಗೊಂಡಿರುವ ಕಟ್ಟಕೋಡಿ, ಬಾಜಿನಡ್ಕ, ಅಜ್ಜಿಕಲ್ಲು ಪ್ರದೇಶಕ್ಕೆ ಮರ್ಕಂಜ ಗ್ರಾಮ ಪಂಚಾಯಿತಿ ವತಿಯಿಂದ ಪಿಕ್ಅಪ್ ನಲ್ಲಿ ನೀರು ಸರಬರಾಜು ಮಾಡಲು ಆರಂಭಿಸಿದ್ದಾರೆ. ಸಿಂಟೆಕ್ಸ್ ಟ್ಯಾಂಕ್ ಗಳಲ್ಲಿ ತುಂಬಿ ಪಿಕ್ಅಪ್ ನಲ್ಲಿ ಕೊಂಡೊಯ್ದು ಮನೆ ಮನೆಗಳಿಗೆ ವಿತರಿಸಲಾಯಿತು. ಪೈಪ್ ಕಡಿದು ಕುಡಿಯುವ ನೀರು ಸ್ಥಗಿತಗೊಂಡು ಜನರು ಸಂಕಷ್ಟಕ್ಕೆ ಸಿಲುಕಿದ ಮರ್ಕಂಜ ಗ್ರಾಮದ ಅಜ್ಜಿಕಲ್ಲು, ಕಟ್ಟಕೋಡಿ, ಅರಂತೋಡು ಗ್ರಾಮದ ಬಾಜಿನಡ್ಕ ಪ್ರದೇಶಕ್ಕೆ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾ.ಪಂ.ಅಧ್ಯಕ್ಷ ಮೋನಪ್ಪ ಪೂಜಾರಿ ಶುಕ್ರವಾರ ಸಂಜೆ ಭೇಟಿ ನೀಡಿದ್ದರು.
ಪೈಪ್ ಕಡಿದ ಕಾರಣ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹನಿ ನೀರಿಲ್ಲದೆ 15 ಕ್ಕೂ ಹೆಚ್ಚು ಕುಟುಂಬಗಳು ಪರದಾಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡು ಮರ್ಕಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ನೇತೃತ್ವದಲ್ಲಿ ಶನಿವಾರ ಬೆಳಿಗ್ಗಿನಿಂದಲೇ ಪಿಕ್ ಅಫ್ನಲ್ಲಿ ನೀರು ಸರಬರಾಜು ಮಾಡಲು ಆರಂಭಿಸಿದರು. ರೆಂಜಾಳ ದೇವಸ್ಥಾನದ ಸಮೀಪದ ಸಾರ್ವಜನಿಕ ಬೋರ್ವೆಲ್ ನಿಂದ ಮತ್ತು ದೇವಸ್ಥಾನ ಸಮೀಪದ ಟ್ಯಾಂಕಿಯಿಂದ ಒಂದು ಸಾವಿರ ಮತ್ತು 500 ಲೀಟರ್ನ ಎರಡು ಸಿಂಟೆಕ್ಸ್ ಟ್ಯಾಂಕ್ ಗಳಲ್ಲಿ ತುಂಬಿ ಕಟ್ಟಕೋಡಿ, ಅಜ್ಜಿಕಲ್ಲು ಮತ್ತು ಬಾಜಿನಡ್ಕದ ಮನೆ ಮನೆಗಳಿಗೆ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರ ಜೊತೆಗೆ ಸ್ಥಳೀಯ ಯುವಕರು ಕೈ ಜೋಡಿಸಿ ನೀರಿನ ಸರಬರಾಜು ಮಾಡಿದರು.
ಪ್ರದೇಶದ ಜನರು ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದಲ್ಲಿ ಹೊಂಡಗಳಲ್ಲಿ ತುಂಬುವ ನೀರನ್ನು ಪೈಪ್ ಹಾಕಿ ತೆಗೆದುಕೊಂಡು ಹೋಗಿ ಕುಡಿಯಲು ಮತ್ತು ಇತರ ದೈನಂದಿನ ಉಪಯೋಗಕ್ಕೆ ಬಳಸುತ್ತಿದ್ದರು. ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಬುಧವಾರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ಏಕಾ ಏಕಿ ಪೈಪ್ ಗಳನ್ನು ತುಂಡರಿಸಿ ನೀರು ಸರಬರಾಜಿಗೆ ತಡೆ ಒಡ್ಡಿದ ಕಾರಣ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಸೋಮವಾರಕ್ಕೆ ಮುಂಚಿತವಾಗಿ ಇದಕ್ಕೆ ಬದಲಿಯಾಗಿ ಪೈಪ್ ಅಳವಡಿಸಿ ಹಾಕಿ ನೀರು ಸರಬರಾಜು ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಪ್ಪಿದ್ದಲ್ಲಿ ಅರಣ್ಯ ಇಲಾಖೆಯ ಕಚೇರಿ ಎದುರಿನಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರದೇಶದ ಜನರು ಎಚ್ಚರಿಕೆ ನೀಡಿದ್ದಾರೆ.
ಜನರ ಕುಡಿಯುವ ನೀರಿನ ಪೈಪ್ ಗಳನ್ನು ತುಂಡರಿಸಿ ಜನರ ಜೀವ ಜಲಕ್ಕೆ ತಡೆ ಒಡ್ಡಿರುವುದು ಅತ್ಯಂತ ಅಮಾನವೀಯ ಘಟನೆ. ಜನರ ಸಂಕಷ್ಟವನ್ನು ಅರಿತು ಗ್ರಾಮ ಪಂಚಾಯಿತಿ ವತಿಯಿಂದ ವಾಹನಗಳಲ್ಲಿ ನೀರನ್ನು ಕೊಂಡೊಯ್ದು ಈ ಪ್ರದೇಶಕ್ಕೆ ವಿತರಣೆ ಮಾಡುತ್ತಿದ್ದೇವೆ. ಸೋಮವಾರಕ್ಕೆ ಮುಂಚಿತವಾಗಿ ಪೈಪ್ ಗಳನ್ನು ಹಾಕಿ ನೀರಿನ ಸರಬರಾಜು ಮರು ಸ್ಥಾಪನೆ ಮಾಡದಿದ್ದರೆ ಇಡೀ ಗ್ರಾಮಸ್ಥರು ಬಂದು ಸುಳ್ಯ ಅರಣ್ಯ ಇಲಾಖೆಯ ಕಚೇರಿ ಎದುರಿನಲ್ಲಿ ಧರಣಿ ಕುಳಿತುಕೊಳ್ಳುತ್ತೇವೆ. ಮತ್ತೆ ಆಗುವ ಎಲ್ಲಾ ಅನಾಹುತಗಳಿಗೆ ಇಲಾಖೆಯೇ ಹೊಣೆಯಾಗಬೇಕಾದೀತು.”- ಮೋನಪ್ಪ ಪೂಜಾರಿ. ಅಧ್ಯಕ್ಷ ಗ್ರಾ.ಪಂ.ಮರ್ಕಂಜ