ಕಾಸರಗೋಡು: ಕಾಸರಗೋಡು ಮದ್ರಸ ಶಿಕ್ಷಕ ರಿಯಾಜ್ ರನ್ನು ಕೊಲೆಗೈದ ಪ್ರಮುಖ ಆರೋಪಿ ಕುಖ್ಯಾತ ಕ್ರಿಮಿನಲ್ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಮುಖ ಆರೋಪಿಯಾಗಿರುವ ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಸಮೀಪದ ಅಜೇಶ್ (20) ಈ ಹಿಂದೆ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈ ಪ್ರಕರಣಗಳಲ್ಲೂ ಈತನನ್ನು ಬಂಧಿಸಲಾಗಿದೆ. ಕ್ಲಬ್ ವೊಂದರ ಸಮೀಪ ಹಕೀಮ್ ಎಂಬಾತನ ಮೇಲೆ ಬಿಯರ್ ಬಾಟ್ಲಿಯಿಂದ ತಲೆಗೆ ಬಡಿದು ಹಲ್ಲೆ ನಡೆಸಿದ ಪ್ರಕರಣದಲ್ಲಿ ಕೊಲೆ ಯತ್ನ ಮೊಕದ್ದಮೆ ಈತನ ಮೇಲೆ ಹೂಡಲಾಗಿದೆ.
ಇನ್ನೋರ್ವ ಯುವಕನ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ನಡೆಸಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಆರೋಪಿಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದೀಗ ರಿಯಾಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದೆ ಅಜೇಶ್ ನ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಎರಡು ತಿಂಗಳ ಹಿಂದೆ ಬಿಜೆಪಿ ಕರೆ ನೀಡಿದ್ದ ಹರತಾಳದ ಸಂದರ್ಭದಲ್ಲಿ ಬೈಕ್ ಸವಾರನನ್ನು ತಡೆದು ಬೈಕನ್ನು ಹಾನಿಗೊಳಿಸಿ ಸವಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಕೊಲೆ ನಡೆಸುವ ಎರಡು ದಿನಗಳ ಹಿಂದೆ ಮಾರ್ಚ್ 18 ರಂದು ರಾತ್ರಿ ತಾಲಿಪಡ್ಪುವಿನಲ್ಲಿ ನಡೆದ ಕಬಡ್ಡಿ ಪಂದ್ಯಾಟದ ಸಂದರ್ಭದಲ್ಲಿ ಬೈಕ್ ಕಳವುಗೈದ ಪ್ರಕರಣದಲ್ಲಿ ಅಜೇಶ್ ಮತ್ತು ಎರಡನೇ ಆರೋಪಿ ನಿತಿನ್ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.