ಮೂಡುಬಿದಿರೆ: ಅಳಿಯೂರು ಪಾಪುಲಾಡಿ ಎಂಬಲ್ಲಿ ನವವಿವಾಹಿತೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಸಂಧ್ಯಾ ಜೈನ್ (32) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ವಕೀಲ ಮಯೂರ ಕೀರ್ತಿ ಎಂಬವರನ್ನು ಕಳೆದ ವರ್ಷದ ನವೆಂಬರ್ ನಲ್ಲಿ ವಿವಾಹವಾಗಿದ್ದರು.
ಭಾನುವಾರ ಮಹಾವೀರ ಜಯಂತಿ ಪ್ರಯುಕ್ತ ಸಮೀಪದ ದರೆಗುಡ್ಡೆ ಬಸದಿಯಲ್ಲಿ ಪೂಜೆಗೆಂದು ತೆರಳಿದ್ದ ದಂಪತಿ ರಾತ್ರಿ 8.30 ಸುಮಾರಿಗೆ ಮನೆಗೆ ಜೊತೆಗೆ ವಾಪಾಸ್ಸು ಬಂದಿದ್ದರೆಂದು ತಿಳಿದುಬಂದಿದೆ.
ಮನೆಗೆ ಬಂದ ಮೇಲೆ ಇದ್ದಕ್ಕಿದ್ದಂತೆ ಕಾಣೆಯಾದ ಸಂಧ್ಯಾ ಜೈನ್ ರಾತ್ರಿ ಹನ್ನೆರಡಾದರೂ ಪತ್ತೆಯಾಗದಿದ್ದರಿಂದ ಆಕೆಯ ಪತಿ ಮಯೂರ ಕೀರ್ತಿ ಅವರು ಮೂಡುಬಿದಿರೆ ಪೊಲೀಸರಿಗೆ ನಾಪತ್ತೆ ದೂರು ನೀಡಿದರೆಂದು ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ಸಾರ್ವಜನಿಕರು ವ್ಯಾಪಕವಾಗಿ ಸಂಧ್ಯಾ ಅವರ ಹುಡುಕಾಟದಲ್ಲಿ ತೊಡಗಿದ್ದಾಗ ಮನೆಯಿಂದ ಸ್ವಲ್ಪ ದೂರದಲ್ಲಿರುವ ವಾಸವಿಲ್ಲದ ಮನೆಯೊಂದರ ಸಣ್ಣ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಸಾಗರ ಮೂಲದ ಸಂಧ್ಯಾ ಜೈನ್ ವಿವಾಹಕ್ಕೂ ಮೊದಲು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಸಾರ್ವಜನಿಕರ ಹುಡುಕಾಟ ಸಂದರ್ಭ ಬಾವಿಯಲ್ಲಿ ಶವ ಪತ್ತೆಯಾದ್ದರಿಂದ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ತೆರಳಿದ್ದು, ಮೂಡುಬಿದಿರೆ ತಹಸೀಲ್ದಾರ್ ಮುಹಮ್ಮದ್ ಇಸಾಕ್ ಸಮ್ಮುಖದಲ್ಲಿ ಶವದ ಮಹಜರು ನಡೆಯಿತು. ಶವವನ್ನು ಮೇಲಕ್ಕೆತ್ತಿ ಬಳಿಕ ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.