ಉಳ್ಳಾಲ: ವೃದ್ಧರೋರ್ವರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುವುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ, ಅದೇ ಸಿಬ್ಬಂದಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುರುವಾರ ತಲಪಾಡಿ ಟೋಲ್ ಗೇಟಿನಲ್ಲಿ ನಡೆದಿದೆ.
ಕಂದಕ ನಿವಾಸಿ ಹಾಜಿ ರೆಸಿಡೆನ್ಸಿಯ ಮಹಮ್ಮದ್ ಸಾಲಿ ಎಂಬವರ ಪುತ್ರ ಅಬ್ದುಲ್ ಹಮೀದ್ ಸರಾಫತ್ (25) ಹಲ್ಲೆಗೊಳಗಾದವರು. ಕೆಲಸದ ನಿಮಿತ್ತ ಮಂಗಳೂರಿನಿಂದ ಕಾಸರಗೋಡಿಗೆ ಕಾರಿನಲ್ಲಿ ತೆರಳುವ ಸಂದರ್ಭ ಘಟನೆ ನಡೆದಿದೆ. ಮಧ್ಯಾಹ್ನ 2.30 ರ ವೇಳೆ ತಲಪಾಡಿ ಟೋಲ್ ಗೇಟ್ ತಲುಪುತ್ತಿದ್ದಂತೆ ಅಲ್ಲಿ ವಾಹನ ಚಾಲಕ ವೃದ್ಧರೋರ್ವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಅವರದ್ದು ತಪ್ಪಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದ್ದರು. ಇದೇ ವೇಳೆ ಟೋಲ್ ಗೇಟಿನ ಸುಮಾರು 20 ರಷ್ಟು ಸಿಬ್ಬಂದಿ ಸುತ್ತುವರಿದು ಕೆನ್ನೆಗೆ, ಬೆನ್ನಿಗೆ, ಎದೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಅಪರಿಚಿತರೊಬ್ಬರು ಉಳ್ಳಾಲದ ಸರೋಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಎಲ್ಲರಲ್ಲೂ ಗುರುತಿನ ಚೀಟಿಯ ಬ್ಯಾಜ್ ಇದ್ದು, ಇದರಿಂದ ಸಿಬ್ಬಂದಿಯೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಟೋಲ್ ಗೇಟಿನಲ್ಲಿರುವ ಸಿಸಿಟಿವಿ ದಾಖಲೆಯನ್ನು ಸಂಗ್ರಹಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ನಕಲಿ ರಶೀದಿ ನೀಡಿ ವಾಹನ ಸವಾರರೊಬ್ಬರನ್ನು ವಂಚಿಸಿದ ಘಟನೆಯೂ ಇದೇ ಟೋಲ್ ಬೂತ್ ನಲ್ಲಿ ನಡೆದಿತ್ತು.
ಹೆಚ್ಚುವರಿ ಹಣ ವಸೂಲಿ
ಮಂಗಳೂರು ವಿಮಾನ ನಿಲ್ದಾಣಕ್ಕೆಂದು ಬರುವ ಕೇರಳಿಗರು ವಾಪಸ್ಸಾಗುವಾಗ ವಾಹನದಲ್ಲಿ ಸಾಮಾನುಗಳು ಇರುತ್ತವೆ. ಅದನ್ನು ಪ್ರಶ್ನಿಸುವ ಟೋಲ್ ಸಿಬ್ಬಂದಿ ವಾಹನಗಳಲ್ಲಿ ಹೆಚ್ಚುವರಿ ಸಾಮಾನುಗಳಿವೆ, ಅದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂದು ಹೆಚ್ಚುವರಿ ಹಣ ವಸೂಲಿ ಮಾಡುವ ದಂಧೆಯೂ ಇಲ್ಲಿ ವ್ಯಾಪಕವಾಗಿದೆ. ಬೆಂಗಳೂರು, ಹೈದರಾಬಾದ್ ಎಲ್ಲೆಡೆಯೂ ಟೋಲ್ ಸಮೀಪ ಪೊಲೀಸರು ಇರುತ್ತಾರೆ. ಆದರೆ ಜಿಲ್ಲೆಯಲ್ಲಿರುವ ಎಲ್ಲಾ ಟೋಲ್ ಬೂತುಗಳಲ್ಲಿ 10 ರಿಂದ 15 ರಷ್ಟು ಯುವಕರಿದ್ದು, ಗೂಂಡಾಗಳಂತೆ ವತರ್ಿಸುತ್ತಿರುವ ಪ್ರಮೇಯಗಳು ನಡೆಯುತ್ತಿವೆ. ಇದನ್ನು ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.