News Kannada
Saturday, September 24 2022

ಕರಾವಳಿ

ಹೊಳೆಗೆ ಕೊಳಚೆ ನೀರು: ಅಧ್ಯಯನಕ್ಕೆ ಜಿಲ್ಲಾಧಿಕಾರಿ ಆದೇಶ - 1 min read

Photo Credit :

ಹೊಳೆಗೆ ಕೊಳಚೆ ನೀರು: ಅಧ್ಯಯನಕ್ಕೆ ಜಿಲ್ಲಾಧಿಕಾರಿ ಆದೇಶ

ಸುಳ್ಯ: ಜಿಲ್ಲೆಯಲ್ಲಿ ಕೊಳಚೆ ನೀರು ನದಿ ಪಾತ್ರಗಳಿಗೆ ಸೇರಿ ನೀರು ಕಲುಷಿತವಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಕುರಿತು ಸಮಗ್ರ ಅಧ್ಯಯನ ನಡೆಸಲು ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಸುಳ್ಯ ನಗರದ ವಿವಿಧ ಚರಂಡಿಗಳಲ್ಲಿನ ತ್ಯಾಜ್ಯ ನೀರು ನಗರ ಸಮೀಪದಲ್ಲಿ ಹರಿಯುತ್ತಿರುವ ಕಂದಡ್ಕ ಹೊಳೆಗೆ ಸೇರುತ್ತಿದ್ದು ಆ ಹೊಳೆಯು ಪಯಸ್ವಿನಿ ನದಿಗೆ ಸೇರಿ ಸಂಪೂರ್ಣ ಮಲಿನಗೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

ಈ ಹಿನ್ನಲೆಯಲ್ಲಿ ಮತ್ತು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೊಳಚೆ ನೀರು ನದಿ ಪಾತ್ರಗಳಿಗೆ ಸೇರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಈ ಆದೇಶ ನೀಡಲಾಗಿದೆ. ಸುಳ್ಯ ಪಟ್ಟಣ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ, ಪುತ್ತೂರು ನಗರ ಸಭೆ ಮತ್ತು ಬಂಟ್ವಾಳ ಪುರಸಭೆಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಮಲಿನಗೊಳ್ಳುತ್ತಿರುವ ಕೇಂದ್ರಗಳ ವಿವರ, ಅದರ ಕಾರಣ ಮತ್ತು ಪರಿಣಾಮಗಳ ಬಗ್ಗೆ ಅಧ್ಯಯನ ನಡಸಿ ಅದನ್ನು ತಡೆಗಟ್ಟಲು ಸಾಧ್ಯವಾಗುವ ಲಘು ಯೋಜನೆ ಮತ್ತು ಅದರ ಅನುಷ್ಠಾನದ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಪಂಚಾಯಿತಿ ಕುಡಿಯುವ ನೀರಿನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು ಅಥವಾ ಮುಖ್ಯಾಧಿಕಾರಿ ಮತ್ತು ಗ್ರಾಮೀಣ ಪ್ರದೇಶಲ್ಲಾದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ. ತಂಡ ಪ್ರತಿ ಪ್ರದೇಶಕ್ಕೆ ಭೇಟಿ ನೀಡಿ ಎಲ್ಲೆಲ್ಲ ಕೊಳಚೆ ನೀರು ನದಿಗಳಿಗೆ ಸೇರುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು.

ಕಂದಡ್ಕ ಹೊಳೆ ಪೂರ್ತಿ ಕೊಳಚೆ ನೀರು:
ಸುಳ್ಯ ನಗರದ ಚರಂಡಿಗಳ ಮೂಲಕ ಕೊಳಚೆ ನೀರು ಪಯಸ್ವಿನಿ ನದಿಯ ಉಪ ಹೊಳೆಯಾದ ಕಂದಡ್ಕ ಹೊಳೆಗೆ ಸೇರುವುದು ಮುಂದುವರಿದಿದ್ದು ಹೊಳೆ  ಪೂರ್ತಿಯಾಗಿ ತ್ಯಾಜ್ಯ ನೀರು ತುಂಬಿದೆ. ಸುಳ್ಯ ನಗರ ವ್ಯಾಪ್ತಿಯ ಕಾನತ್ತಿಲ ಎಂಬಲ್ಲಿ ಕೊಳಚೆ ನೀರು ಕಂದಡ್ಕ ಹೊಳೆಗೆ ಬಂದು ಸೇರುತಿದ್ದು ಈ ಮಲಿನ ನೀರು ಪಯಸ್ವಿನಿ ನದಿಯ ಒಡಲು ಸೇರುತಿದೆ. ಇದರಿಂದ ಲಕ್ಷಾಂತರ ಮಂದಿಯ ಕುಡಿಯುವ ನೀರಿನ ಮೂಲವಾದ ಪಯಸ್ವಿನಿಯು ಕಡು ಬೇಸಿಗೆಯ ಇಂದಿನ ದಿನಗಳಲ್ಲಿ ನಿರಂತರ ಮಲಿನಗೊಳ್ಳುತಿದೆ. ಕಂದಡ್ಕ ಹೊಳೆಯಲ್ಲಿ ಈಗ ಸಂಪೂರ್ಣ ಕೊಳಚೆ ನೀರು, ಪ್ಲಾಸ್ಟಿಕ್, ಬಾಟಲಿ, ಪ್ಲೇಟ್ ಮತ್ತಿತರ ಎಲ್ಲಾ ತ್ಯಾಜ್ಯಗಳು ಸೇರಿ ಕೊಚ್ಚೆ ನೀರಾಗಿ ಹರಿಯುತ್ತಿದೆ. ಹೊಳೆಯ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು ಅಲ್ಲಲ್ಲಿ ಹೊಂಡಗಳಲ್ಲಿ ಕೊಳಚೆ ನೀರು ಮತ್ತು ತ್ಯಾಜ್ಯಗಳು ಶೇಖರಣೆಗೊಂಡು ದುರ್ನಾತ ಬೀರುತ್ತಿದೆ.

See also  ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆಗೆ ಶರಣು

ಒಳಚರಂಡಿಗೆ ಕೇವಲ 70 ಸಂಪರ್ಕ:
ಸುಳ್ಯ ನಗರದಲ್ಲಿ ಕೊಳಚೆ ನೀರನ್ನು ಹರಿಸಲು ಸುಮಾರು ಮೂರು ಕೋಟಿ ರೂ ಹೆಚ್ಚು ಖರ್ಚು ಮಾಡಿ ಒಳಚರಂಡಿ ನಿರ್ಮಾಣಗೊಂಡಿದ್ದರೂ ಅದರ ಸಂಪರ್ಕ ನೀಡಿ ಕೊಳಚೆ ನೀರನ್ನು ಒಳಚರಂಡಿ ಮೂಲಕ ಹರಿಸದೆ ಮಳೆ ನೀರು ಹರಿಯುವ ಚರಂಡಿಗಳಿಗೆ ಬಿಡುಲಾಗುತ್ತಿದೆ. ಒಳಚರಂಡಿ ಘಟಕವು ಎರಡು ಎಂಎಲ್ಡಿ ಅಂದರೆ 20 ಲಕ್ಷ ಕೊಳಚೆ ನೀರನ್ನು ಶುದ್ಧೀಕರಿಸುವ ಸಾಮಥ್ರ್ಯ ಹೊಂದಿದ್ದು ಎರಡು ಸಾವಿರಕ್ಕೂ ಮಿಕ್ಕಿ ಸಂಪರ್ಕವನ್ನು ನೀಡಬಹುದಾದರೂ ಈಗ ಸುಳ್ಯ ನಗರದಲ್ಲಿ ಒಳಚರಂಡಿ ಸಂಪರ್ಕ ನೀಡಿರುವುದು ಕೇವಲ ಅರುವತ್ತರಿಂದ ಎಪ್ಪತ್ತು ಮಾತ್ರ. ನಗರದಲ್ಲಿ ಎಲ್ಲೆಡೆ ಒಳಚರಂಡಿ ನಿರ್ಮಾಣವಾಗಿಲ್ಲ. ಇದ್ದ ಕಡೆಯೂ ಸಂಪರ್ಕ ಚೇಂಬರ್ ಮತ್ತಿತರ ಕಾಮಗಾರಿ ಪೂರ್ತಿಯಾಗದೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಒಳಚರಂಡಿ ವ್ಯವಸ್ಥೆಯನ್ನು ಕೂಡಲೇ ಸಮರ್ಪಕ ಮಾಡಿ ಸಂಪರ್ಕ ನೀಡುವುದಾಗಿ ನಗರ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಕ್ಸ್:
ಕೊಳಚೆ ನೀರು ಹೊಂಡದಲ್ಲಿ ಶೇಖರಿಸಿ ಶುದ್ದೀಕರಣ ಘಟಕಕ್ಕೆ ?
ಕೊಳಚೆ ನೀರು ಮಳೆ ನೀರಿನ ಚರಂಡಿಗೆ ಸೇರಿ ನದಿಗೆ ಸೇರುವುದನ್ನು ತಡೆಯಲು ಹೊಳೆಯ ಬದಿಯಲ್ಲಿ ಹೊಂಡ ಮಾಡಿ ಅಲ್ಲಿ ಕೊಳಚೆ ನೀರನ್ನು ಸಂಗ್ರಹಿಸಿ ಅದನ್ನು ಒಳಚರಂಡಿಯ ಶುದ್ದೀಕರಣ ಘಟಕಕ್ಕೆ ಸರಬರಾಜು ಮಾಡುವ ಯೋಜನೆ ರೂಪಿಸಬಹುದು. ಇದರಿಂದ ಕೊಳಚೆ ನದಿಗೆ ಸೇರುವುದನ್ನು ತಡೆಯಬಹುದು ಎಂದು ಇಂಜಿನಿಯರ್ಗಳು ಅಭಿಪ್ರಾಯಪಡುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು