ಮಂಗಳೂರು: ಪಿಲಿಕುಲ ಡಾ.ಶಿವರಾಮ ಕಾರಂತ ನಿಸರ್ಗಧಾಮ ಮತ್ತು ಬೆಂಗಳೂರಿನ ಕೆಪೆಲ್ಲಾ ಸ್ಕೂಲ್ ಆಫ್ ಆರ್ಟ್ ವತಿಯಿಂದ ವಾಮಂಜೂರಿನ ಡಾ.ಶಿವರಾಮ ಕಾರಂತ ಪಿಲಿಕುಳದ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹತ್ತು ದಿನಗಳ ಚಿಣ್ಣರ ಚಿಲಿಪಿಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ರವಿವಾರ ಜರಗಿತು.ಶಿಬಿರದಲ್ಲಿ ಪಾಲ್ಗೊಂಡಿದ್ದ ಪುಟಾಣಿ ಶಿಬಿರಾರ್ಥಿಗಳು ದೀಪ ಬೆಳಗಿಸುವ ಮೂಲಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ ರಾವ್ ಅತಿಥಿಗಳಾಗಿದ್ದರು. ಒತ್ತಡದ ಬದುಕಿನಲ್ಲಿರುವ ಮಕ್ಕಳಿಗೆ ಪ್ರಕೃತಿಮುಖಿಯಾಗಿರುವ ಪಿಲಿಕುಲದಲ್ಲಿ ಶಿಬಿರ ಹಮ್ಮಿಕೊಂಡಿರುವುದು ಬಹಳ ಉಪಯುಕ್ತವಾಗಿದೆ. ಫೋಷಕರು ತಮ್ಮ ಮಕ್ಕಳಿಗೆ ತಮ್ಮ ಇಷ್ಟವನ್ನು ಬಲವಂತವಾಗಿ ಹೇರುವುದನ್ನು ಬಿಟ್ಟು ಮಕ್ಕಳ ಅಭಿರುಚಿಗೆ ಅನುಗುಣವಾಗಿ ಅವರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು ಎಂದು ಡಾ.ಕೆ.ವಿ ರಾವ್ ಸಲಹೆ ನೀಡಿದರು.
6 ರಿಂದ 14 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳಿಗಾಗಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 10 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಬೆಂಗಳೂರಿನ ಸಾಂಸ್ಕ್ರತಿಕ ಕಲಾ ಸಂಸ್ಥೆಯಾದ ಕೆಪೆಲ್ಲಾ ಸ್ಕೂಲ್ ಆಫ್ ಆರ್ಟ್ ನ ಸಿಬ್ಬಂದಿಗಳು ಮಕ್ಕಳಿಗೆ ಕಲಾತ್ಮಕ ಹಾಗೂ ಸೃಜನಾತ್ಮಕ ಕಲೆಗಳ ಬಗ್ಗೆ ತರಬೇತಿ ಹಾಗೂ ಮಾಹಿತಿ ನೀಡೀದರು. ಮಂಗಳೂರಿನ ಸುತ್ತಮುತ್ತ ಪರಿಸರದ ಸುಮಾರು 82 ಮಂದಿ ವಿಧ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಮೈಟಿ ಗಿಬ್ಸನ್, ವೀಣಾ ಪ್ರಸನ್ನ, ವಾಣಿ ಗೋಕುಲ್ ದಾಸ್, ಮಲ್ಲಿಕ ಮೇಡಂ, ಭಾಸ್ಕರ್ ಎನ್, ವಿದ್ಯಾ, ಶರತ್, ಮುರಾರಿ, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು. ಪಿಲಿಕುಲ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ, ಆಡಳಿತಾಧಿಕಾರಿ ಬಾಬು ದೇವಾಡಿಗ, ಪಿಲಿಕುಲ ನಿಸರ್ಗಧಾಮದ ಪ್ರಾಜೇಕ್ಟ್ ಮ್ಯಾನೇಜರ್ ಡಾ.ನಿತಿನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಪೆಲ್ಲಾ ಸ್ಕೂಲ್ ಆಫ್ ಆರ್ಟ್ನ ನಿರ್ದೇಶಕರು ಹಾಗೂ ಸಂಘಟಕರಾದ ಮೈಥಿಲಿ ಕೆ.ಎಸ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಇಬ್ಬರು ಮಕ್ಕಳು ಕಾರ್ಯಕ್ರಮ ನಿರ್ವಹಿಸಿದರು.