ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಧುನಿಕ ತಂತ್ರಜ್ಞಾನದ ಪಾತಾಳ ಗಂಗೆ ವಿನೂತನ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಇಂಡಿ, ಆಳಂದ, ಪಾವಗಡ, ಚಳ್ಳಕೆರೆ, ಆನೇಕಲ್, ಶ್ರೀನಿವಾಸಪುರ ಸೇರಿದಂತೆ 10 ಕಡೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ನಡೆದಿದೆ. ಮೂರು ಸಾವಿರ ಮೀಟರ್ ನಿಂದ 8 ಸಾವಿರ ಮೀಟರ್ ಆಳದ ಭೂಗರ್ಭದ ಪದರದಿಂದ ನೀರು ತೆಗೆಯುವ ದೇಶದ ಮೊದಲ ಯೋಜನೆ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ. ವಾಟರ್ ಕ್ವೆಸ್ಟ್ ಹೈಡ್ರೋ ರಿಸೋರ್ಸಸ್ ಸಂಸ್ಥೆ ಮೂಲಕ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಈ ಯೋಜನೆ ಯಶಸ್ವಿಯಾದಲ್ಲಿ ಪ್ರತಿ ಗಂಟೆಗೆ 80 ಸಾವಿರದಿಂದ 1 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ಸಿಗುವ ಸಾಧ್ಯತೆ ಇದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಸಚಿವರು ತಿಳಿಸಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿ ಸಂಬಂಧ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ತಿಳಿಸಿದರು.
ವಿಫಲ ಕೊಳವೆಬಾವಿ ಮುಚ್ಚಿ: ವಿಫಲಗೊಂಡ ಕೊಳವೆಬಾವಿಗಳನ್ನು ಮುಚ್ಚುವಂತೆ ಸರ್ಕಾರ 2014 ಸೆಪ್ಟೆಂಬರ್ 6 ರಂದು ಆದೇಶ ಹೊರಡಿಸಿದ ಬಳಿಕ ರಾಜ್ಯದಲ್ಲಿ ಈ ವರೆಗೆ 1,47,780 ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ. ಅನುಪಯುಕ್ತ ಹಾಗೂ ವಿಫಲ ಕೊಳವೆಬಾವಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಿಫಲವಾದ ಕೊಳವೆಬಾವಿ ಮುಚ್ಚಿಸಿರುವ ಬಗ್ಗೆ ಛಾಯಾಚಿತ್ರ ಸಮೇತ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ವರದಿ ಮಾಡಿದಲ್ಲಿ ಮಾತ್ರ ಮತ್ತೆ ಕೊಳವೆ ಬಾವಿ ಕೊರೆಯುವವರಿಗೆ ಅವಕಾಶ ಕಲ್ಪಿಸುವ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.