ಬೆಳ್ತಂಗಡಿ: ನಡ ಗ್ರಾಮದಲ್ಲಿರುವ ಇಂದಬೆಟ್ಟು ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು ಎಂಬಲ್ಲಿನ ಸರಕಾರೀ ನಾಮಫಲಕಗಳ ಮೇಲೆ ನರಸಿಂಹ ಗಡ ಎಂಬ ಮೂಲ ಹೆಸರನ್ನು ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗಡಾಯಿಕಲ್ಲಿಗೆ ಹೋಗುವ ಎರಡು ಕಿ.ಮೀ ಮೊದಲು ಅರಣ್ಯ ಇಲಾಖೆಯವರು ಜಮಲಾಬಾದ್ ಕೋಟೆಗೆ ದಾರಿ ಎಂದು ಬರೆದಿರುವ ನಾಮಫಲಕದ ಮೇಲೆ ನರಸಿಂಹ ಗಡ ಎಂದು ಕಪ್ಪು ಬಣ್ಣದಿಂದ ಬರೆಯಲಾಗಿದೆ. ಇನ್ನೊಂದೆಡೆ ಲೋಕೋಪಯೋಗಿ ಇಲಾಖೆಯವರ ನಾಮಫಲಕದಲ್ಲಿದ್ದ ಜಮಲಾಬಾದ್ ಎಂಬ ಹೆಸರಿನ ಮೇಲೆಯೂ ನರಸಿಂಹ ಗಡ ಎಂದು ತಿದ್ದಲಾಗಿದೆ. ಇಷ್ಟೇ ಅಲ್ಲದೆ ಜಮಲಾಬಾದ್ ಎರಡು ಕಿ.ಮೀ ಎಂದು ಸೂಚಿಸುವ ರಸ್ತೆ ಬದಿಯ ಮೈಲುಗಲ್ಲಿನ ಮೇಲೆಯೂ ಹೆಸರನ್ನು ತಿದ್ದಿ ನರಸಿಂಹ ಗಡ ಎಂದು ಬರೆಯಲಾಗಿದೆ.
ಈ ರೀತಿ ಮಾಡಿರುವ ಉದ್ದೇಶ ಏನು ಎಂಬುದು ನಿಗೂಢವಾಗಿದೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಸಂಶಯ ಪಡುವಂತಾಗಿದೆ. ಸ್ಥಳೀಯ ಪೋಲಿಸರು ಭೇಟಿ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.