ಮಂಗಳೂರು: ಸರ್ವಧರ್ಮದ ಜನರನ್ನು ಭಕ್ತಿಪೂರ್ವಕವಾಗಿ ನೋಡುವವರು ರಮಾನಾಥ ರೈ. ಜಾತಿ ರಾಜಕಾರಣ ಇಟ್ಟುಕೊಂಡು ಅಧಿಕಾರ ಮಾಡುವ ಉದ್ದೇಶ ಅವರಿಗಿಲ್ಲ. ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿ ಮಾಡುತ್ತಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದು ದ.ಕ. ಯುವ ಕಾಂಗ್ರೆಸ್ ನ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಕಲ್ಲಡ್ಕ ಗಲಭೆ ಪ್ರಕರಣದ ಕುರಿತಾಗಿ ರೈ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳ ಕುರಿತು ಮಂಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ದ.ಕ. ಜಿಲ್ಲೆ ಕಂಡ ಧೀಮಂತ ನಾಯಕ. ಅಲ್ಪ ಸಂಖ್ಯಾತ ಹಾಗೂ ಬಹು ಸಂಖ್ಯಾತ ಮತೀಯವಾದಿಗಳನ್ನು ಸಚಿವರು ಸದಾ ಕಾಲ ಖಂಡಿಸುತ್ತಾ ಬಂದಿದ್ದಾರೆ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಸಚಿವರು ಮಾತನಾಡಿರುವುದು ಸತ್ಯದ ಸಂಗತಿ. ಪ್ರಚೊದನಕಾರಿ ಭಾಷಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹೇಳಿರುವುದು ತಪ್ಪಲ್ಲ ಎಂದು ತಿಳಿಸಿದರು.
ವಿನಾಯಕ ಬಾಳಿಗ ಕೊಲೆ ಪ್ರಕರಣ ಸಂದರ್ಭ ಬಿಜೆಪಿ ಯಾವ ವಿಷಯದ ಕುರಿತು ಧ್ವನಿ ಎತ್ತಲಿಲ್ಲ. ಆದರೆ, ಈಗ ರಾಜಕೀಯ ಲಾಭಕ್ಕೋಸ್ಕರ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿ ಮಾಡಲು ಬಿಜೆಪಿ ಕಾರಣ. ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎಂದವರು ಧರ್ಮ ಬಿಟ್ಟು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್ ಮಾಡಲು ಕೊಲೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಬಿಸಿಸಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಗಿರೀಶ್ ಆಳ್ವ, ಪ್ರಶಾಂತ್ ಕುಳಾಲ್, ರೂಪೇಶ್ ರೈ, ಮತ್ತಿತರರು ಉಪಸ್ಥಿತರಿದ್ದರು.