ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅತೀ ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ ಬಂಟ್ವಾಳ ತಾಲೂಕಿನಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೋಮವಾರಕ್ಕೆ ಬರೋಬ್ಬರಿ ಒಂದು ತಿಂಗಳಾಯ್ತು. ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರಿಗೆ ಚೂರಿ ಇರಿದ ಘಟನೆಯ ಬಳಿಕ ಕಲ್ಲಡ್ಕ ಪರಿಸರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದರಿಂದ ಮೇ 27ರಂದು ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನಿಷೇಧಾಜ್ಞೆಯ ನಡುವೆಯೂ ಕೊಲೆ, ಕೊಲೆಯತ್ನ, ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಗಳು ಮರುಕಳಿಸಿದ್ದರಿಂದ ನಿಷೇಧಾಜ್ಞೆಯನ್ನು ಒಂದೊಂದೇ ವಾರ ವಿಸ್ತರಿಸುತ್ತಾ ಬರಲಾಗಿದೆ. ಇನ್ನೂ ಎರಡು ವಾರಗಳ ಕಾಲ ನಿಷೇಧಾಜ್ಞೆ ಮುಂದುವರಿಯುವ ಸಾಧ್ಯತೆ ಇದೆ.
ನಿಷೇಧಾಜ್ಞೆ ವಿಸ್ತರಣೆಗೊಂಡ ಅವಧಿ: ಮೇ 27ರಿಂದ ಜೂನ್ 2, ಜೂನ್ 3ರಿಂದ ಜೂನ್ 9, ಜೂನ್ 10ರಿಂದ ಜೂನ್ 16, ಜೂನ್ 17ರಿಂದ ಜೂನ್ 23, ಜೂನ್ 23ರಿಂದ ಜೂನ್ 29.
ಪೊಲೀಸ್ ಸರ್ಪಗಾವಲು: ನಿಷೇಧಾಜ್ಞೆಯ ನಡುವೆಯೂ ಅಹಿತಕ ಘಟನೆಗಳು ಮರುಕಳಿಸಿರುವುದರಿಂದ ಬಂಟ್ವಾಳ ತಾಲೂಕಿನ ಅತೀ ಕೋಮು ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕ, ಬಿ.ಸಿ.ರೋಡ್, ಕೈಕಂಬ, ವಿಟ್ಲ ಕನ್ಯಾನದಲ್ಲಿ ನಾಲ್ಕು ದಿನಗಳಿಂದ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉಳಿದಂತೆ ಮೆಲ್ಕಾರ್, ಮಾಣಿ, ಫರಂಗಿಪೇಟೆ, ಬಂಟ್ವಾಳ ಪೇಟೆ ಸಹಿತ ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಬಳಿಕ ತಾಲೂಕಿನಲ್ಲಿ ಪರಿಸ್ಥಿತಿ ಇನ್ನಷ್ಟು ಹದೆಗಟ್ಟಿದ್ದರಿಂದ ಹೆಚ್ಚಿನ ಭದ್ರತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ ಪಿ) ಪಡೆ ಹಾಗೂ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಂಟ್ವಾಳಕ್ಕೆ ಕರೆಸಲಾಗಿದೆ. ಜಿಲ್ಲೆಯ ಭದ್ರತಾ ಉಸ್ತುವಾರಿಯನ್ನಾಗಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈರವರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೊಡಗಿಸಿಕೊಳ್ಳಲಾಗಿತ್ತು. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಡಿವೈಎಸ್ಪಿ, ಸರ್ಕಲ್, ಎಸ್ಸೈಗಳನ್ನು ಕರೆಸಿ ಜಿಲ್ಲೆಯ ವಿವಿಧ ಪ್ರದೇಶದ ಭದ್ರತಾ ಉಸ್ತುವಾರಿಯನ್ನು ನೀಡಲಾಗಿದೆ. ಬಂಟ್ವಾಳ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಚೆಕ್ಪೋಸ್ಟ್ ಗಳನ್ನು ರಚಿಸಲಾಗಿದ್ದು ವಾಹನಗಳ ತಪಾಸಣೆ ಕಾರ್ಯ ಮುಂದುವರಿದಿದೆ. ಅಲ್ಲದೆ ಇಡೀ ತಾಲೂಕಿನಲ್ಲಿ ರಾತ್ರಿ ವೇಳೆ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಪೊಲೀಸ್ ಇಲಾಖೆಗೆ ಸರ್ಜರಿ: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ರಾಜ್ಯ ಸರಕಾರ ಮೇಜರ್ ಸರ್ಜರಿ ನಡೆಸಿದೆ. ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸಬರನ್ನು ನೇಮಕ ಮಾಡಿದ್ದರೆ ಇನ್ನು ಕೆಲವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.
ಒಟ್ಟಿನಲ್ಲಿ ಕಳೆದೊಂದು ತಿಂಗಳಿನಿಂದ ಇಡೀ ಬಂಟ್ವಾಳ ತಾಲೂಕು ಕೋಮು ಜ್ವರದಿಂದ ಬಳಲುತ್ತಿದ್ದು, ಪ್ರತಿಯೊಬ್ಬರೂ ಭಯದಿಂದಲೇ ದಿನದೂಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತೆಕಂತೆ, ವದಂತಿಗಳ ಸರಮಾಲೆಗಳೂ ಆಗಾಗ್ಗೆ ಹರಿದು ಮನಸ್ಸುಗನ್ನು ಕದಡಿಸುವ ಪ್ರಯತ್ನಗಳೂ ಕೆಲ ಕಿಡಿಗೇಡಿಗಳಿಂದಾಗುತ್ತಿದ್ದು, ಪೊಲೀಸರಿಗೂ ಇದು ತಲೆನೋವಾಗಿ ಪರಿಣಮಿಸಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೊಬ್ಬರು ವಾರದಲ್ಲಿ ಮೂರು ಬಾರಿ ಬಂಟ್ವಾಳಕ್ಕೆ ಭೇಟಿ ನೀಡಿದ್ದು, ಪಶ್ಚಿಮವಲಯ ಐಜಿಪಿಯೊಬ್ಬರು ಬಂಟ್ವಾಳ ನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿ ಬಂದೋಬಸ್ತ್ ಹಾಗೂ ಕೊಲೆ ತನಿಖೆಗೆ ನಿರ್ದೇಶನ ನೀಡಿರುವುದು ಬಂಟ್ವಾಳದಲ್ಲಿ ಇದು ಮೊದಲನೇ ಬಾರಿ. ಆದರೂ ತಾಲೂಕಿನಾದ್ಯಂತ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಆದಷ್ಟು ಬೇಗ ಜಿಲ್ಲೆಯಲ್ಲಿ ಸಾಮರಸ್ಯ ಮೆರೆಯಲಿ ಎಂಬುದು ಶಾಂತಿಪ್ರಿಯ ಜನತೆಯ ಆಗ್ರಹ.