ಉಳ್ಳಾಲ: ವೃದ್ಧ ದಂಪತಿಗೆ ಬೆದರಿಸಿದ ಕಳ್ಳನೋರ್ವ ಒಂದು ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವುಗೈದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ಮಂಗಳೂರಿನಲ್ಲಿ ದಸ್ತಾವೇಜು ಬರಹಗಾರರಾಗಿರುವ ಸದಾಶಿವಯ್ಯ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯೊಳಗಿದ್ದ 30,000 ರೂ. ನಗದು ಮತ್ತು 22 ಪವನ್ ಚಿನ್ನಾಭರಣವನ್ನು ಓರ್ವನೇ ಕಳ್ಳ ದೋಚಿದ್ದಾನೆ. ಮನೆಯ ಹಿಂಬದಿಯ ಕಂಪೌಂಡ್ ಹಾರಿ, ಮುಂಬಾಗಿಲ ಚಿಲಕ ಒಡೆದು ಒಳನುಗ್ಗಿದ ಕಳ್ಳ ಸೂಟ್ ಕೇಸಿನಲ್ಲಿರಿಸಿದ್ದ ಚಿನ್ನ ಮತ್ತು ನಗದು ಕಳವುಗೈದಿದ್ದನು. ಶಬ್ದ ಕೇಳಿ ಸದಾಶಿವಯ್ಯ ಅವರ ಪತ್ನಿ ಎದ್ದು ನೋಡಿದಾಗ, ಕಳ್ಳನ ಕೃತ್ಯ ಬೆಳಕಿಗೆ ಬಂದಿತ್ತು. ಕೂಡಲೇ ಬೊಬ್ಬಿಟ್ಟಾಗ ಸದಾಶಿವಯ್ಯ ಅವರು ಕೂಡಾ ಎದ್ದಿದ್ದರು. ಆದರೆ ಕಳ್ಳ ಇಬ್ಬರಿಗೂ ಬೊಬ್ಬಿಟ್ಟಲ್ಲಿ ಕೊಲ್ಲುವುದಾಗಿ ಬೆದರಿಸಿ ಕಳವುಗೈದ ಸೊತ್ತುಗಳೊಂದಿಗೆ ಪರಾರಿಯಾಗಿದ್ದಾನೆ. ದಡೂತಿ ಶರೀರದವನಾಗಿದ್ದ ಕಳ್ಳ ಮುಖಕ್ಕೆ ಬಟ್ಟೆಯನ್ನು ಕಟ್ಟಿದ್ದನು ಎಂದು ಮನೆಮಂದಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ಪುತ್ರಿ ಇಂದು ಮನೆಗೆ ಬರಬೇಕಿದ್ದು, ನಾಳೆ ಜತೆಯಾಗಿ ಎಲ್ಲರೂ ಮುಂಬೈಗೆ ಪ್ರಯಾಣಿಸಬೇಕಾದುದರಿಂದ ಸೂಟ್ ಕೇಸಿನಲ್ಲಿ ಚಿನ್ನ ಮತ್ತು ನಗದು ಪ್ಯಾಕ್ ಮಾಡಿ ಇಟ್ಟಿದ್ದರೆನ್ನಲಾಗಿದೆ.
ಇನ್ನೊಂದು ಮನೆಯಲ್ಲಿ ವಿಫಲ ಯತ್ನ : ಮುಡಿಪು ಸಮೀಪ ಜಮೀಲಾ ಎಂಬವರ ಮನೆಗೆ ನುಗ್ಗಿದ ಕಳ್ಳರ ತಂಡ ಮನೆಯೊಳಗಿಡೀ ಹುಡುಕಾಡಿ ಏನೂ ಸಿಗದೇ ಬರಿಗೈಲಿ ವಾಪಸ್ಸಾಗಿದ್ದಾರೆ. ಎರಡು ಪ್ರಕರಣಗಳು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಎಸಿಪಿ ಶೃತಿ, ಠಾಣಾಧಿಕಾರಿ ಅಶೋಕ್ ಭೇಟಿ ನೀಡಿದ್ದು, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿದ್ದಾರೆ.