ಬಂಟ್ವಾಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ತಾಲೂಕಿನ ಕಾವಳ ಮೂಡೂರು ಗ್ರಾಮದ ಕೆದ್ದಳಿಕೆ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಸ್ಥಳೀಯ 15 ರ ಹರೆಯದ ಬಾಲಕಿ ತನ್ನ ಮನೆಗೆ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪರಿಚಯಸ್ಥ ಕೆದ್ದಳಿಕೆಯ ಸೀತಾರಾಮ(38)ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಈತ ಬಾಲಕಿಯ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ವೇಳೆ ಆಕೆ ಬೊಬ್ಬೆ ಹಾಕಿದ್ದು ಈ ಸಂದರ್ಭದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಆರೋಪಿ ಸೀತಾರಾಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.