ಮಂಗಳೂರು: ರಸ್ತೆಗಳ ಮಧ್ಯೆ ರೈಲ್ವೆ ಹಳಿ ಇದ್ದರೆ ರೈಲು ಬಂದಾಗ ಗೇಟ್ ಹಾಕುವುದು ಸಾಮಾನ್ಯ. ರೈಲ್ವೆ ಗೇಟ್ ಹಾಕಿದ ಸಂದರ್ಭದಲ್ಲಿ ಯಾರು ಕೂಡ ವಾಹನಗಳು ಸಂಚರಿಸಲು ಸಾಧ್ಯವಿಲ್ಲ.
ಮಂಗಳೂರಿನ ಪಾಂಡೇಶ್ವರದಲ್ಲಿರುವ ರೈಲ್ವೆ ಗೇಟ್ನಲ್ಲಿ ರೈಲು ಬರುವ ವೇಳೆ ಬಂದ್ ಆದರೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಸಮಸ್ಯೆಯಿಲ್ಲದಂತಾಗಿದೆ. ಅಪಾಯವನ್ನು ಆಹ್ವಾನಿಸುತ್ತಿರುವ ಈ ರೈಲ್ವೆ ಗೇಟ್ ಬಗ್ಗೆ ಯಾರು ಕೂಡ ಚಿಂತಿತರಾಗಿಲ್ಲ. ರೈಲ್ವೆ ಗೇಟ್ ಹಾಕಿದರೆಂದರೆ ಅಲ್ಲಿಂದ ಯಾವುದೇ ವಾಹನವು ಗೇಟ್ ತೆರೆಯುವ ತನಕ ಹೊರ ಹೋಗಲು ಸಾಧ್ಯವಿಲ್ಲ. ರೈಲ್ವೆ ಇಲಾಖೆಯವರು ಹಾಕಿರುವ ಗೇಟ್ನ ವ್ಯವಸ್ಥೆ ಆ ರೀತಿ ಇರುತ್ತದೆ. ಆದರೆ ಮಂಗಳೂರು ಹೃದಯಭಾಗದಲ್ಲಿಯೆ ಇರುವ ರೈಲ್ವೆ ಗೇಟ್ನಲ್ಲಿ ಗೇಟ್ ಹಾಕಿದರೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಸಮಸ್ಯೆಯಿಲ್ಲದಂತಾಗಿದೆ.
ಜಿಲ್ಲಾಧಿಕಾರಿ ಕಚೇರಿಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಪಾಂಡೇಶ್ವರದಲ್ಲಿ ನಿತ್ಯವು ಕಾಣುವ ದೃಶ್ಯ. ಈ ರೈಲ್ವೆ ಹಳಿಯಲ್ಲಿ ಪ್ರಯಾಣಿಕರು ಇರುವ ರೈಲು ಓಡಾಡುವುದಿಲ್ಲ. ಗೂಡ್ಸ್ ರೈಲು ಮಾತ್ರ ಓಡಾಡುತ್ತದೆ. ಈ ರೈಲ್ವೆ ಹಳಿ ಮೂಲಕ ದಿನದಲ್ಲಿ ಸುಮಾರು ಹತ್ತು ಬಾರಿ ಗೂಡ್ಸ್ ರೈಲು ಸಂಚಾರ ನಡೆಯುತ್ತದೆ. ಪ್ರತಿ ಬಾರಿಯೂ ಗೂಡ್ಸ್ ರೈಲು ಸಂಚರಿಸುವಾಗ ರೈಲ್ವೆ ಗೇಟ್ ಹಾಕಲಾಗುತ್ತದೆ. ಆದರೆ ಇಲ್ಲಿ ರೈಲ್ವೆ ಗೇಟ್ ಹಾಕಿದರೂ ದ್ವಿಚಕ್ರ ವಾಹನಗಳು ಮಾತ್ರ ಈ ಗೇಟ್ ನ ಒಳತೂರಿ ಸಂಚರಿಸುತ್ತದೆ. ಅಪಾಯವನ್ನು ಮೈಮೇಲೆ ಎಳೆದುಕೊಂಡು ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಾರೆ.
ಈ ರೈಲ್ವೆ ಗೇಟ್ನಲ್ಲಿ ಇರುವ ದೋಷವೆ ಇದಕ್ಕೆಲ್ಲ ಕಾರಣ. ರೈಲ್ವೆ ಗೇಟ್ನ ಕೆಳಭಾಗದಲ್ಲಿರಬೇಕಾದ ಸರಳುಗಳು ಇಲ್ಲದೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಗೇಟ್ನ ಒಳಹೊಕ್ಕು ಹೋಗಲು ಸಾಧ್ಯವಾಗುತ್ತಿದೆ. ಇದನ್ನು ತಡೆಯಲು ಗೇಟ್ ನಲ್ಲಿ ಬದಲಾವಣೆ ಮಾಡಬೇಕಾಗಿದೆ. ಅಪಾಯ ಸಂಭವಿಸುವ ಮುನ್ನ ಜಿಲ್ಲಾಡಳಿತ, ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.