ಸುಳ್ಯ: ನಾಟಕೀಯ ಬೆಳವಣಿಗೆಯಲ್ಲಿ ಅಜ್ಜಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಬೀನಾ ಕರುಣಾಕರ ಅಡ್ಪಂಗಾಯ ಆಯ್ಕೆಯಾಗಿದ್ದಾರೆ. ಈ ಮೂಲಕ ಪಂಚಾಯಿತಿಯಲ್ಲಿ ಬಹಮತವಿದ್ದರೂ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಗೆ ತೀವ್ರ ಮುಖಭಂಗ ಉಂಟಾಗಿದೆ.
ಪಂಚಾಯಿತಿ ಅಧ್ಯಕ್ಷರಾಗಿದ್ದ ಪ್ರಸಾದ್ ಕುಮಾರ್ ರೈ ರಾಜೀನಾಮೆ ನೀಡಿದ ಕಾರಣ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 10 ಮತ್ತು ಬಿಜೆಪಿ ಬೆಂಬಲಿತ ಎಂಟು ಮಂದಿ ಸದಸ್ಯರಿದ್ದರು. ಚುನಾವಣೆ ನಡೆದಾಗ ಬಿಜೆಪಿ ಬೆಂಬಲಿತರಾದ ಬೀನಾ ಕರುಣಾಕರ ಅವರಿಗೆ ಒಂಭತ್ತು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರುಣಾಕರ ಅಡ್ಪಂಗಾಯ ಅವರಿಗೆ ಎಂಟು ಮತಗಳು ದೊರೆತವು. ಒಂದು ಮತ ಅಸಿಂಧುವಾಯಿತು. 2015ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದಾಗ ಬಹುಮತ ಪಡೆದಿದ್ದ ಕಾಂಗ್ರೆಸ್ ನ ಪ್ರಸಾದ್ ಕುಮಾರ್ ರೈ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡು ವರ್ಷಗಳ ಬಳಿಕ ಕರುಣಾಕರ ಅಡ್ಪಂಗಾಯ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಅಂದು ಪಕ್ಷದಲ್ಲಿ ಉಂಟಾದ ಒಪ್ಪಂದದ ಪ್ರಕಾರ ಪ್ರಸಾದ್ ಕುಮಾರ್ ರೈ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಗಿತ್ತು. ತಹಶೀಲ್ದಾರ್ ಎಂ.ಎಂ.ಗಣೇಶ್ ಚುನಾವಣಾಧಿಕಾರಿಯಾಗಿದ್ದರು.
ಅಡ್ಡಮತದಾನ-ಕಾಂಗ್ರೆಸ್ ಗೆ ಮುಖಭಂಗ
ಅಜ್ಜಾವರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ 10 ಸದಸ್ಯರಿದ್ದರು. ಆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಎಂಟು ಮತಗಳು ಮಾತ್ರ ದೊರೆತವು. ಬಿಜೆಪಿಗೆ ತನ್ನ ಎಂಟೂ ಸದಸ್ಯರ ಮತ ದೊರೆಯುವುದರ ಜೊತೆಗೆ ಕಾಂಗ್ರೆಸ್ ಪಾಳಯದಿಂದ ಒಂದು ಅಧಿಕ ಮತ ದೊರೆತು ಮತಗಳ ಸಂಖ್ಯೆ ಒಂಭತ್ತಕ್ಕೇರಿತು. ಕಾಂಗ್ರೆಸ್ ಬೆಂಬಲಿತರ ಇನ್ನೊಂದು ಮತ ಅಸಿಂಧುವಾಗುವ ಮೂಲಕ ಬಿಜೆಪಿಯ ಗೆಲವು ಸುಲಭವಾಯಿತು. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಕೈಯಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಗೆ ತೀವ್ರ ಮುಖಭಂಗ ಉಂಟಾಗಿದೆ. ಒಂದು ಅಡ್ಡಮತದಾನ ಮತ್ತು ಒಂದು ಅಸಿಂಧು ಮತ ಚಲಾವಣೆಯಾಗಿರುವುದು ಸ್ಥಳೀಯ ಕಾಂಗ್ರೆಸ್ ನೇತೃತ್ವವನ್ನು ಕಂಗೆಡಿಸಿದೆ.
ಬಿಜೆಪಿ ವಿಜಯೋತ್ಸವ
ಗ್ರಾಮ ಪಂಚಾಯಿತಿ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬೀನಾ ಕರುಣಾಕರ ಅಡ್ಪಂಗಾಯ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಅಜ್ಜಾವರದಲ್ಲಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು.