ಮಂಗಳೂರು: ನಗರದ ಪ್ರಭಾವಿ ಹಿಂದೂ ಮುಖಂಡರೊಬ್ಬರ ಮಗಳೊಬ್ಬಳು ಲವ್ ಜಿಹಾದ್ ಜಾಲದಲ್ಲಿ ಸಿಲುಕಿ ಈಗ ಮತ್ತೆ ತನ್ನ ಮನೆಗೆ ಮರಳಿದ್ದು, ಇದರ ಬಗ್ಗೆ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ದೂರು ನೀಡಲಾಗಿದೆ.
ಯುವತಿಯು ನಗರದ ಎಸ್ ಡಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದು, ಕೆಲವು ತಿಂಗಳ ಮೊದಲು ಆಕೆ ಮುಂಬಯಿಯ ಮೊಹಮ್ಮದ್ ಇಕ್ಬಾಲ್ ಎಂಬಾತನ ಜತೆಗೆ ಮುಂಬಯಿಗೆ ತೆರಳಿ ಅಲ್ಲಿ ಆತನನ್ನು ಮದುವೆಯಾಗಿದ್ದಳು ಎಂದು ತಿಳಿದುಬಂದಿದೆ.
ಘಟನೆ ವಿವರ: ಯುವತಿಗೆ ಇಕ್ಬಾಲ್ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ. ಇಬ್ಬರ ಮಧ್ಯೆ ಸ್ನೇಹ ಬೆಳೆದ ಬಳಿಕ ಕೆಲವು ತಿಂಗಳ ಮೊದಲು ಆಕೆ ಇಕ್ಬಾಲ್ ಜತೆಗೆ ಮುಂಬಯಿಗೆ ಪರಾರಿಯಾಗಿದ್ದಳು. ಆದರೆ ಈ ವಿಚಾರವು ಹಲವಾರು ತಿಂಗಳ ಕಾಲ ತುಂಬಾ ಗೌಪ್ಯವಾಗಿತ್ತು. ಬಳಿಕ ಯುವತಿಯನ್ನು ಮಂಗಳೂರಿಗೆ ಕರೆತರಲಾಗಿದೆ. ಆದರೆ ಇಕ್ಬಾಲ್ ಮುಂಬಯಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾನೆ. ಮನೆಗೆ ಮರಳಿರುವ ಯುವತಿಯು ತನ್ನ ಸ್ವ ಇಚ್ಛೆಯಿಂದ ಮನೆಯವರೊಂದಿಗೆ ತೆರಳಿದ್ದೇನೆ ಎಂದು ಅಫಿದಾವಿತ್ ಬರೆದುಕೊಟ್ಟಿದ್ದಾಳೆ. ಇದನ್ನು ಮುಂಬಯಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗಿದೆ.
ಕಳೆದ ವಾರ ಮಂಗಳೂರಿಗೆ ಆಗಮಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಬಗ್ಗೆ ದೂರು ನೀಡಲಾಗಿದೆ.