ಮಂಗಳೂರು: ನೀರು ತುಂಬಿದ್ದ ಕಲ್ಲುಕೋರೆಯಲ್ಲಿ ಸ್ನಾನಕ್ಕೆ ಹೋದ ಬಾಲಕನೊಬ್ಬ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಮಳವೂರು ಗ್ರಾ.ಪಂ. ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ಸಮೀಪದ ಗುಂಡಾಪು ಪದವು ಬಳಿಯ ಜರಿ ಎಂಬಲ್ಲಿ ಭಾನುವಾರ ನಡೆದಿದೆ.
ಬಜಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕಿಯಾಗಿರುವ ಸಾವಿತ್ರಿ ಹಾಗೂ ಎಲ್ಲಪ್ಪ ದಂಪತಿಯ ಪುತ್ರ ಸಂಜಯತ್ ಕುಮಾರ್(16) ಎಂಬಾತನೇ ಮೃತಪಟ್ಟವ.
ತಾನು ಕೆಲಸ ಮಾಡುತ್ತಿದ್ದ ವೆಲ್ಡಿಂಗ್ ಶಾಪ್ ಗೆ ಭಾನುವಾರ ರಜೆಯಿದ್ದ ಕಾರಣ ಸ್ನೇಹಿತ ರಂಜಿತ್ ಜತೆಗೆ ಸಂಜಯ್ ಗುಂಡಾಪು ಪದವಿಗೆ ತೆರಳಿದ್ದಾನೆ. ಈ ವೇಳೆ ಸಂಜಯ್ ಕಾಲು ಜಾರಿ ನೀರು ತುಂಬಿದ್ದ ಕೋರೆಗೆ ಬಿದ್ದಿದ್ದಾನೆ. ಆತನ ಸ್ನೇಹಿತ ರಂಜಿತ್ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದು ರಕ್ಷಿಸಿ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕೋರೆಯ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.