ಪಡುಬಿದ್ರೆ: ಪಡುಬಿದ್ರೆ ಎಂಡ್ ಪಾಯಿಂಟ್ ಬಳಿ ಅನುಷ್ಠಾನವಾಗಬೇಕಿದ್ದ ಬ್ಲೂ ಫ್ಲಾಗ್ ಬೀಚ್ ಯೋಜನೆಯನ್ನು ನಡಿಪಟ್ಣ ಬೀಚ್ ಪ್ರದೇಶದಲ್ಲಿ ಸುಮಾರು 600 ಮೀಟರ್ ಪ್ರದೇಶದಲ್ಲಿ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಬ್ಲೂ ಫ್ಲಾಗ್ ಬೀಚ್ ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಕೇಂದ್ರ ತಂಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು. ಬ್ಲೂ ಫ್ಲಾಗ್ ಬೀಚ್ ಯೋಜನೆ ಅನುಷ್ಠಾನಿಸುವ ಸಲುವಾಗಿ ಶಾಸಕರು, ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯರು ಸೇರಿ ಆ.26ರಂದು ಪಡುಬಿದ್ರೆಯಲ್ಲಿ ಸಭೆ ನಡೆಯಲಿದೆ.
ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಸ್ಥಳೀಯರಿಗೆ ಯಾವುದೇ ತೊಂದರೆ ಆಗದಂತೆ ನೈಸರ್ಗಿಕವಾಗಿ ಬೀಚ್ ಅಭಿವೃದ್ಧಿ ಮಾಡಲಾಗುತ್ತದೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈ ಬೀಚ್ ನ 2018 ರ ವರ್ಷಾಂತ್ಯಕ್ಕೆ ಜಾಗತಿಕ ಪ್ರಧಾನ ಕಚೇರಿ ಡೆನ್ಮಾರ್ಕ್ ಸಹಯೋಗದೊಂದಿಗೆ ಬ್ಲೂ ಫ್ಲಾಗ್ ಸರ್ಟಿಫಿಕೇಶನ್ ಗುಣಮಟ್ಟದ ಬೀಚ್ ಆಗಲಿದೆ ಎಂದರು.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್, ಯೋಜನೆಯ ಗುತ್ತಿಗೆದಾರ ಕಂಪನಿ ಗುರ್ಗಾಂವ್ ನ ಎ ಟು ಝಡ್ ಇನ್ ಫ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಮನೋಜ್ ತಿವಾರಿ, ಮೊದಲಾದವರು ಉಪಸ್ಥಿತರಿದ್ದರು.