ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಒಂದಲ್ಲ ಎರಡಲ್ಲ ಸಾಲು ಸಾಲಾಗಿ ಹಬ್ಬಗಳ ಸುರಿಮಳೆಯೇ ಶ್ರಾವಣ ಮಾಸದಲ್ಲಿ ಬರುತ್ತೆ. ಈ ಎಲ್ಲಾ ಹಬ್ಬಗಳಲ್ಲಿ ನೂಲ ಹುಣ್ಣಿಮೆ ಅಥವಾ ರಕ್ಷಾ ಬಂಧನ ಒಂದು ಪ್ರಮುಖ ಹಬ್ಬ. ಈ ಹಬ್ಬವನ್ನು ಹಿಂದೂಗಳು ಸೇರಿ ಇನ್ನಿತರ ಧರ್ಮದವರೂ ಆಚರಿಸುತ್ತಾರೆ.
ಶ್ರಾವಣ ಮಾಸದ ನೂಲ ಹುಣ್ಣಿಮೆಯನ್ನು ರಕ್ಷಾ ಬಂಧನದ ಹಬ್ಬವನ್ನಾಗಿ ಆಚರಿಸುತ್ತಾ ಬಂದಿದೆ. ಅಂದು ಸಹೋದರಿಯರು ರಾಖಿಗಳನ್ನು ಶ್ರೀ ಕೃಷ್ಣನ ಮುಂದೆ ಇರಿಸಿ ಪೂಜಿಸಿ ಅನವರತ ನಮ್ಮ ಸಹೋದರರನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾರೆ. ನಂತರ ಸಹೋದರನ ಹಣೆಗೆ ಕುಂಕುಮ, ಅಕ್ಷತೆಗಳನ್ನು ಹಚ್ಚಿ ರಕ್ಷಾ ಬಂಧನವನ್ನು ಕಟ್ಟಿ ಆರತಿ ಮಾಡಿ ಅವರ ಬದುಕಲ್ಲಿ ಯಾವಾಗಲೂ ಸಿಹಿ ತುಂಬಿರಲಿ ಎಂದು ಹಾರೈಸಿ ಸಿಹಿ ತಿನ್ನಿಸುತ್ತಾರೆ. ಸಹೋದರಿಯ ಈ ಪ್ರೀತಿಗೆ ಪ್ರತಿಯಾಗಿ ಸಹೋದರನು ಎಲ್ಲಾ ರೀತಿಯಲ್ಲೂ ರಕ್ಷಿಸುತ್ತೇನೆಂದು ಪುಟ್ಟ ಉಡುಗೊರೆಯೊಂದನ್ನು ನೀಡುವುದು ಈ ಹಬ್ಬದ ವೈಶಿಷ್ಟ್ಯವಾಗಿದೆ. ರಕ್ಷಾಬಂಧನಕ್ಕೆ ಭಾರತ ದೇಶದ ಪುರಾಣ ಹಾಗೂ ಇತಿಹಾಸದಲ್ಲಿ ಹಲವು ಪುರಾವೆಗಳಿವೆ.
ಹಿಂದೆ ಶ್ರೀ ಕೃಷ್ಣ ಪರಮಾತ್ಮನ ಕೈ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಆಗ ಕೃಷ್ಣ ಅವಳಿಗೆ ಸಮಯ ಬಂದಾಗ ಈ ಉಪಕಾರವನ್ನು ತೀರಿಸುತ್ತೇನೆ ಎಂಬ ವಾಗ್ದಾನವನ್ನು ನೀಡಿ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುತ್ತಾನೆ. ದುಶ್ಯಾಸನ ವಸ್ತ್ರಾಭರಣ ಮಾಡುವಾಗ ಕೃಷ್ಣ ಅವಳಿಗೆ ಸೀರೆಯನ್ನು ನೀಡಿ ಕಾಪಾಡುತ್ತಾನೆ. ಮಹಾಭಾರತದಲ್ಲಿ ದ್ರೌಪದಿ ಕೃಷ್ಣನಿಗೆ ರಾಖಿ ಕಟ್ಟಿದರೆ, ಕುಂತಿ ಮೊಮ್ಮಗ ಅಭಿಮನ್ಯುಗೆ ಯುದ್ಧಕ್ಕೆ ತೆರಳುವು ಸಂದರ್ಭ ಕಂಕಣ ಕಟ್ಟುತ್ತಾಳೆ. ಇವುಗಳು ಸಹೋದರ ಸಹೋದರಿಯರ ನಿಜವಾದ ಸಂಬಂಧವನ್ನು ಅರ್ಥೈಸುತ್ತದೆ.
ರಕ್ಷಾ ಬಂಧನ ಬರಿ ಒಂದು ಆಚರಣೆಯಲ್ಲ ಅದು ಸಂಬಂಧಗಳನ್ನು ಬೆಸೆಯುವ, ಭರವಸೆಯ ಆಶಾಕಿರಣವನ್ನು ಮೂಡಿಸಿ ಹೆಣ್ಣಿನ ರಕ್ಷಣೆಗೆ ನಮ್ಮ ಹಿರಿಯರು ನಮಗೆ ರೂಢಿಸಿಕೊಟ್ಟ ಒಂದು ಜವಾಬ್ದಾರಿ ಕೆಲಸ, ಅಣ್ಣನಾದವನು ತಂಗಿಗೆ ತಾನು ಬದುಕಿರುವವರೆಗೂ ರಕ್ಷಣೆ ನೀಡುತ್ತೇನೆಂದೂ, ಅಣ್ಣನ ಶ್ರೇಯಸ್ಸಲ್ಲೇ ತನ್ನ ಜೀವನವಿದೆ ಎಂದು ನಂಬಿ ಕಟ್ಟುವ ರಾಖಿಗೆ ಉಡುಗೊರೆ ಕೊಡುವುದಕ್ಕಿಂತ ಬೆಲೆಯೇ ಕಟ್ಟಲಾಗದ ನಂಬಿಕೆ ಎಂಬ ಉಡುಗೊರೆಯನ್ನು ರಕ್ಷಣೆ ಎಂಬ ಪಾತ್ರೆಯಲ್ಲಿಟ್ಟು ನೀಡಿದರೆ ಸಾಕು ಅದುವೆ ಬೆಲೆ ಕಟ್ಟಲಾಗದ ಸಂಬಂಧಗಳಿಗೆ ಬೆಲೆ ಬಾಳುವ ಉಡುಗೊರೆಯಾಗುವುದು.
ಆದರೆ, ಇಂದು ಈ ಹಬ್ಬವನ್ನು ಕೇವಲ ಒಂದು ಶೋಕಿಗಾಗಿ ಆಚರಿಸಲಾಗುತ್ತಿದ್ದು, ಇದರ ಮೂಲ ಉದ್ದೇಶದ ಮೌಲ್ಯವನ್ನೇ ಕಳೆದುಕೊಂಡು ಬರಿಯ ತೋರಿಕೆಯ ಆಚರಣೆಯಾಗಿ ಬದಲಾಗುತ್ತಿರುವುದೇ ವಿಪರ್ಯಾಸ. ಶಾಲಾ ಕಾಲೇಜುಗಳಿಂದ ಹಿಡಿದು, ಔದ್ಯೋಗಿಕ ಕ್ಷೇತ್ರದಲ್ಲೂ ಇದೊಂದು ಮನೋರಂಜನೆಯ ಆಚರಣೆಯಾಗಿಬಿಟ್ಟಿದೆ. ಹಬ್ಬದ ಮಹತ್ವ ಅರಿಯದೇ, ನಮ್ಮ ಸಂಸ್ಕೃತಿಗೆ ನಾವೇ ಮುಳ್ಳಾಗುತ್ತಿರುವುದು ಬೇಸರದ ಸಂಗತಿ.