ಉಡುಪಿ/ಕುಂದಾಪುರ: ಒಂದೇ ರಾತ್ರಿ ಎರಡು ದೇವಸ್ಥಾನಗಳಿಗೆ ಕಳ್ಳರು ನುಗ್ಗಿದ ಘಟನೆ ಕುಂದಾಪುರದ ಹೊಸಂಗಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಹೊಸಂಗಡಿ ಗ್ರಾಮದ ಎರಡು ದೇವಸ್ಥಾನಗಳ ಮುಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ದೇವರಿಗೆ ಅಲಂಕರಿಸಿದ ಬೆಳ್ಳಿಯ ಸೊತ್ತು ಹಾಗೂ ಕಾಣಿಕೆ ಹುಂಡಿಗಳನ್ನು ದೋಚಿ ಪರಾರಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.
ಕೇವಲ ಅರ್ಧ ಕಿ.ಮೀ ಅಂತರದಲ್ಲಿರುವ ಕೆರೆಕಟ್ಟೆ ವಿರೂಪಾಕ್ಷ ಹಾಗೂ ಶ್ರೀ ಶಾಂತೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ವಿರೂಪಾಕ್ಷ ದೇವಾಲಯದ ದೇವರ ಕಾಣಿಕೆ ಹುಂಡಿಯನ್ನು ಸಮೀಪದ ರಸ್ತೆ ಬದಿಯಲ್ಲಿ ಎಸೆದಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಎಷ್ಟು ಹಣವಿತ್ತು ಎಂಬ ಮಾಹಿತಿ ಇಲ್ಲ.
ಶ್ರಾವಣ ಮಾಸ ಪ್ರಯುಕ್ತ ದೇವಾಲಯಗಳಲ್ಲಿ ಸೋಣೆಯಾರತಿ ಪೂಜೆ ನಡೆದಿದ್ದು, ರಾತ್ರಿ ದೇವರಿಗೆ ಅಲಂಕಾರ ಮಾಡಿದ ವಸ್ತುಗಳನ್ನು ಮತ್ತು ಕಾಣಿಕೆ ಡಬ್ಬವನ್ನು ದೇವಾಲಯದಲ್ಲಿ ಇಟ್ಟು ಅರ್ಚಕರು ಮನೆಗೆ ಹೋಗಿದ್ದ ಸಮಯದಲ್ಲಿ ಕಳ್ಳರು ಒಳನುಗ್ಗಿದ್ದರು. ದೇವರ ವಿಗ್ರಹದ ಬೆಳ್ಳಿಯ ದೃಷ್ಟಿಯನ್ನು ಕಳ್ಳತನ ಮಾಡಿದ್ದಾರೆ.
ಡಿವೈಎಸ್ಪಿ ದಿನೇಶ್ ಕುಮಾರ್ ಬಿ.ಪಿ., ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್., ಅಮಾಸೆಬೈಲು ಠಾಣಾಧಿಕಾರಿ ಶೇಖರ್ ಹಾಗೂ ಸಿಬಂದಿ, ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಏಕಕಾಲದಲ್ಲಿ ಒಂದೇ ಊರಿನ ಎರಡು ದೇವಸ್ಥಾನಗಳಲ್ಲಿ ಕಳವು ನಡೆದಿರುವುದು ಊರವರಿಗೆ ಅಚ್ಚರಿ ಮೂಡಿಸಿದೆ.