ಬೆಳ್ತಂಗಡಿ: ಸೆ.3ರಂದು ಧರ್ಮಸ್ಥಳ ಕನ್ಯಾಡಿ ನಿತ್ಯಾನಂದ ನಗರದಲ್ಲಿ ನಡೆಯುವ ಧರ್ಮ ಸಂಸದ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವ ಉದ್ದೇಶದಿಂದ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಸಮಾಲೋಚನಾ ಸಭೆಯನ್ನು ಬುಧವಾರ ನಡೆಸಿದರು.
ಕಾರ್ಯಕ್ರಮವು ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಇದು ಎಲ್ಲರ ಕಾರ್ಯಕ್ರಮವಾಗಿದೆ. ದೇಶದುದ್ದಗಲದಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು ಜಿಲ್ಲೆಗೆ ಆಗಮಿಸುವುದು ದ.ಕ. ಜಿಲ್ಲೆಯ ಭಾಗ್ಯವಾಗಿದೆ. ಜೊತೆಗೆ 25 ಸಾವಿರದಷ್ಟು ಭಕ್ತರು ಆಗಮಿಸಲಿದ್ದು, ಅದಕ್ಕಾಗಿ ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಎಲ್ಲಾ ಅಗತ್ಯಗಳನ್ನು ಜಿಲ್ಲಾಡಳಿತ ಪೂರೈಸಲಿದ್ದು, ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಕಾರ್ಯಪ್ರವೃತರಾಗಬೇಕು ಎಂದು ಸಚಿವರು ಸೂಚಿಸಿದರು.
ರಸ್ತೆಗಳಲ್ಲಿ ಹೊಂಡ ಗುಂಡಿ ಇರುವುದರಿಂದ ಹಿರಿಯ ಸಾಧು ಸಂತರಿಗೆ ತೊಂದರೆಯಾಗಬಹುದು. ಹೀಗಾಗಿ ದ.ಕ. ಜಿಲ್ಲೆಗೆ ಕೆಟ್ಟ ಹೆಸರು ಬರದಂತೆ ತಕ್ಷಣ ಬಂಟ್ವಾಳದಿಂದ ಚಾರ್ಮಾಡಿ, ಧರ್ಮಸ್ಥಳ ಸಂಪರ್ಕ ರಸ್ತೆಯಲ್ಲಿರುವ ಗುಂಡಿಗಳನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಪಿಡಬ್ಲೂಡಿ ತಕ್ಷಣ ಮುಚ್ಚಬೇಕು. ಮಳೆಗೆ ಕರಗಿ ಹೋಗದಂತೆ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.
ಮೆಸ್ಕಾಂ ಇಲಾಖೆಯು ಯಾವುದೇ ಕಾರಣಕ್ಕೂ ಸೆ.2 ಮತ್ತು 3ರಂದು ವಿದ್ಯುತ್ ಕಡಿತಗೊಳಿಸಬಾರದು, ವಿದ್ಯುತ್ ಕಂಬಗಳ ಮೇಲೆ ಇರುವ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು ಇದಕ್ಕೆ ಅರಣ್ಯ ಇಲಾಖೆಯೂ ತಕ್ಷಣ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವೈಧ್ಯಕೀಯ ವಿಭಾಗದವರು ಬರುವ ಭಕ್ತಾದಿಗಳಿಗೆ ಏನಾದರು ತೊಂದರೆಯಾದರೆ ತಕ್ಷಣ ಸ್ಪಂದಿಸುವ ಬಗ್ಗೆ ಮುಂಜಾಗರುಕತೆ ವಹಿಸಬೇಕು ದೇವಸ್ಥಾನದ ಎದರುಗಡೆ ಪ್ರಥಮ ಚಿಕಿತ್ಸಾ ಕೇಂದ್ರ, ತುರ್ತು ಅಂಬ್ಯುಲೆನ್ಸ್ ಸೇವೆ ಮತ್ತು ವೈದ್ಯರು ಮತ್ತು ಸಿಬ್ಬಂದಿಗಳನ್ನು 24 ಗಂಟೆಯೂ ನೇಮಿಸಬೇಕು. ಕುಡಿಯುವ ನೀರನ್ನು ಪರೀಕ್ಷಿಸಿ ಶುದ್ದ ಕುಡಿಯುವ ನೀರನ್ನು ಒದಗಿಸಬೇಕು. ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸೂಚಿಸಿದರು.