ಸುಳ್ಯ: ಜೋಡುಪಾಲದಲ್ಲಿ ಮತ್ತು ಪರಿಸರದಲ್ಲಿ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದ ಪರಿಣಾಮ ಜನರು ಮನೆಯನ್ನು ತೊರೆಯಬೇಕಾಗಿ ಬಂದಿರುವುದು ಪ್ರದೇಶದ ಸಾಕು ಪ್ರಾಣಿಗಳನ್ನು ಕಂಗೆಡಿಸಿದೆ.
ನೀರು, ಆಹಾರ ಇಲ್ಲದೆ ಜಾನುವಾರುಗಳು ಮತ್ತು ಇತರ ಸಾಕು ಪ್ರಾಣಿಗಳು ಇನ್ನಿಲ್ಲದ ನರಕ ಯಾತನೆ ಅನುಭವಿಸುವಂತಾಗಿದೆ. ಆ.17ರಂದು ಬೆಳಿಗ್ಗೆ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಸಂತ್ರಸ್ತರಾದ ಜೋಡುಪಾಲ, ಮೊಣ್ಣಂಗೇರಿ, ಮದೆನಾಡು, ದೇವರಕೊಲ್ಲಿ ಹಾಗೂ ಅರೆಕಲ್ಲು ಪ್ರದೇಶದಲ್ಲಿನ ಜನರು ಮನೆ, ಆಸ್ತಿ ಪಾಸ್ತಿಗಳನ್ನು, ಸಾಕು ಪ್ರಾಣಿಗಳನ್ನು ಬಿಟ್ಟು ಪರಿಹಾರ ಕೇಂದ್ರಗಳತ್ತ ತೆರಳಬೇಕಾಗಿ ಬಂತು. ಜೋಡುಪಾಲ, ಮೊಣ್ಣಂಗೇರಿ, ಜೋಡುಪಾಲ, ಮದೆನಾಡು ಪ್ರದೇಶದ ಜನರು ಇನ್ನೂ ಮನೆಗಳತ್ತ ತೆರಳಲಾಗದೆ ಪರಿಹಾರ ಕೇಂದ್ರಗಳಲ್ಲಿಯೇ ಉಳಿದಿದ್ದಾರೆ. ಇದರಿಂದ ಈ ಮನೆಗಳಲ್ಲಿದ್ದ ದನ,ಕರುಗಳು, ನಾಯಿ, ಬೆಕ್ಕು, ಮೇಕೆ, ಹಂದಿ, ಕೋಳಿಗಳು ನೀರು ಆಹಾರ ಇಲ್ಲದೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಮ್ಮ ಮನೆ ಮಂದಿಯನ್ನು ಕಾಣದೆ ರೋಧಿಸುವಂತಾಗಿದೆ.
ಪ್ರವಾಹ ಹಾಗೂ ಭೂಮಿ ಕುಸಿತದ ಸಂದರ್ಭಗಳಲ್ಲಿ ದಿಕ್ಕು ತೋಚದೆ ಕೆಲವರು ಹಟ್ಟಿಯಲ್ಲಿದ್ದ ಜಾನುವಾರುಗಳನ್ನು, ಶ್ವಾನಗಳ ಕತ್ತಿನ ಹಗ್ಗ ಬಿಚ್ಚಿ ಹೊರ ಬಿಟ್ಟಿದ್ದರು. ಪ್ರವಾಹ ಮತ್ತು ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಲವು ಸಾಕು ಪ್ರಾಣಿಗಳು ನಾಪತ್ತೆಯಾಗಿರುವ ಮತ್ತು ಸತ್ತಿರುವ ಶಂಕೆಯೂ ವ್ಯಕ್ತವಾಗಿದೆ. ಜನವಾಸ ಇಲ್ಲದ ಪ್ರದೇಶದ ಉಳಿದ ಪ್ರಾಣಿಗಳು ಕಂಗಾಲಾಗಿದ್ದು ಲಭ್ಯವಿರುವ ಶಾಲೆ, ಬಸ್ಸು ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿವೆ. ಕೆಲವು ಪ್ರಾಣಿಗಳು ಮನೆ ಮಂದಿಯ ಬರುವಿಕೆಗಾಗಿ ಮನೆಗಳಲ್ಲಿಯೇ ಕಾಯುತ್ತಿದೆ.
ಪ್ರಾಣಿಗಳ ರಕ್ಷಣೆಗೆ ಮುಂದಾದ ಇಲಾಖೆ
ದುರಂತ ಪೀಡಿತ ಪ್ರದೇಶದಲ್ಲಿನ ಜಾನುವಾರುಗಳ ರಕ್ಷಣೆ ಮಾಡುವ ಕೈಂಕರ್ಯಕ್ಕೆ ಸುಳ್ಯ ತಾಲೂಕಿನ ಪಶು ಸಂಗೋಪನಾ ಇಲಾಖೆ ಮುಂದಾಗಿದ್ದು ಸುಳ್ಯ ತಾಲೂಕಿನ ಪಶು ವೈದ್ಯರ ತಂಡ ಕೆಲವು ದಿನಗಳಿಂದ ಕಾರ್ಯನಿರತವಾಗಿದೆ. ಸಹಾಯಕ ನಿರ್ದೇಶಕ ಡಾ. ಕೆ.ಎಂ.ಗುರುಮೂರ್ತಿ, ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಕೆ. ನೇತೃತ್ವದ ತಂಡವು ಪ್ರದೇಶಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ಹುಡುಕಿ ಅಗತ್ಯ ಪಶು ಆಹಾರ ಹಾಗೂ ಚಿಕಿತ್ಸೆ ಒದಗಿಸುತ್ತಿದ್ದಾರೆ. ದಾನಿಗಳ ಸಹಕಾರದೊಂದಿಗೆ ಪಶು ಆಹಾರವನ್ನು ಸಂಗ್ರಹಿಸಲಾಗುತ್ತಿದ್ದು ಪ್ರತೀ ಸಂತ್ರಸ್ತ ಜಾನುವಾರಿಗೆ ದಿನವೊಂದಕ್ಕೆ ಸುಮಾರು ಒಂದೂವರೆ ಕೆ.ಜಿ ಪಶು ಆಹಾರವನ್ನು ಸುಮಾರು 15ರಿಂದ 20ದಿನಗಳ ವರೆಗೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ದಾನಿಗಳಿಂದ ಒಣಮೇವು ಸಂಗ್ರಹಿಸಿ ಅದರ ಪೂರೈಕೆಗೂ ಇಲಾಖೆ ಪ್ರಯತ್ನಿಸುತ್ತಿದೆ.
ಕಳೆದ ಎರಡು ದಿನಗಳಿಂದ ಇಲಾಖೆಯ ತಂಡವು ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಲಭ್ಯವಿದ್ದ ರೈತರಿಗೆ ಪಶು ಆಹಾರವನ್ನು ನೀಡಿದ್ದಾರೆ. ಆಹಾರ ಇಲ್ಲದೆ ಬಳಲಿದ್ದ ಪ್ರಾಣಿಗಳಿಗೆ ಆಹಾರ, ಅಗತ್ಯ ಶುಶ್ರೂಷೆ ನೀಡಿದ್ದಾರೆ. ಸುಮಾರು 24 ನಾಯಿಗಳು, 18 ಮೇಕೆಗಳು ಹಾಗೂ 11 ಹಸುಗಳನ್ನು ಪತ್ತೆ ಹಚ್ಚಿ ಆಹಾರ ನೀಡಲಾಗಿದೆ. ಇದಲ್ಲದೇ ಜೇಡ್ಲ ಈ ಪ್ರದೇಶದಲ್ಲಿ ಸುಮಾರು 35 ಜಾನುವಾರುಗಳು ಸಿಕ್ಕಿ ಹಾಕಿಕೊಂಡಿದ್ದು ಈ ಕುರಿತು ಇಲಾಖೆ ಗಮನ ಹರಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ. ಸಂತ್ರಸ್ತ ಪ್ರಾಣಿಗಳ ರಕ್ಷಣೆಗೆ ಇಲಾಖೆ ನಡೆಸುತ್ತಿರುವ ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪಶು ವೈದ್ಯ ಸಂಘ ಮತ್ತು ಪ್ರಾಣಿಪ್ರಿಯ ದಾನಿಗಳು ಇಲಾಖೆಯೊಂದಿಗೆ ಕೈಜೋಡಿಸಿದೆ.