ಬಂಟ್ವಾಳ: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ಮಂಗಳವಾರ ನಡೆದಿದೆ.
ಕಂಬಳಬೆಟ್ಟು ನೂಜಿ ನಿವಾಸಿ ಜಗದೀಶ ಹಾಗೂ ಕೊಳ್ನಾಡು ಗ್ರಾಮದ ಕೋಜಿಗುರಿ ನಿವಾಸಿ ಪ್ರವೀಣ್ ಗಾಯಗೊಂಡ ಕಾರ್ಮಿಕರು.
ಕೊಳ್ನಾಡು ಗ್ರಾಮದ ಪಡಾರು ಕುಡ್ತಿಕಲ್ಲು ಎಂಬಲ್ಲಿ ಹಳೆಯ ತಂತಿಗಳನ್ನು ಬದಲಾಯಿಸುತ್ತಿದ್ದ ವೇಳೆ ವಿದ್ಯುತ್ ಹರಿದು ಕಂಬದಲ್ಲಿದ್ದ ಇಬ್ಬರು ಕೆಳಗಡೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇನ್ವರ್ಟರ್ ಕರೆಂಟ್ ಪ್ರವೇಶಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.