News Kannada
Thursday, December 08 2022

ಕರಾವಳಿ

ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪು: ಬಂಟ್ವಾಳದಲ್ಲಿ ಉಪವಾಸ ಸತ್ಯಾಗ್ರಹ

Photo Credit :

ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪು: ಬಂಟ್ವಾಳದಲ್ಲಿ ಉಪವಾಸ ಸತ್ಯಾಗ್ರಹ

ಬಂಟ್ವಾಳ: ಹಿಂದೂಗಳ ಶೃದ್ದಾಕೇಂದ್ರ ಶಬರಿಮಲೆಯಲ್ಲಿ ಈ ಹಿಂದಿನಂತೆ ಸಂಪ್ರದಾಯ ಮುಂದುವರಿಯಬೇಕು, ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಕೇರಳ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಅಯ್ಯಪ್ಪ ಭಕ್ತ ವೃಂದದ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ, ಭಜನೆ ಸೋಮವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ನಡೆಯಿತು.

ಬೆಳಿಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಂಸದರು, ಮಹಿಳೆಯರಲ್ಲೂ ಜೀವಮಾನದಲ್ಲಿ ಒಮ್ಮೆಯಾದರೂ ಶಬರಿಮಲೆಗೆ ಹೋಗಬೇಕೆಂಬ ಆಸೆಯಿದ್ದರೂ, ಅಲ್ಲಿನ ಸಂಪ್ರದಾಯವನ್ನು ಮುರಿಯುವುದು ಸರಿಯಲ್ಲ ಎಂದರು. ಇದು ಧಾರ್ಮಿಕ ನಂಬಿಕೆಯ ವಿಚಾರವಾಗಿದ್ದು, ಶತಮಾನದ ಇತಿಹಾಸವಿರುವ ಶಬರಿಮಲೆಯ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಜನರ ಭಾವನೆಯನ್ನು ಆರ್ಥೈಸಿಕೊಂಡು ಅಯ್ಯಪ್ಪ ಭಕ್ತರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕೇರಳ ಸರಕಾರ ಮೇಲ್ಮನವಿ ಸಲ್ಲಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಂಡಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಭಾಗವಹಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಹಿಂದೂಗಳ ನಂಬಿಕೆ, ಸಂಪ್ರದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣದ ವಿರುದ್ದ ಹಿಂದೂ ಸಮಾಜ ಎದ್ದು ನಿಲ್ಲಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು.

ಕೇರಳದ ಕೆಲವು ದೇವಾಲಯದಲ್ಲಿ ಈಗಲೂ ಪುರುಷರಿಗೆ ಪ್ರವೇಶ ನಿಷೇಧವಿದೆ. ಇದು ಅಲ್ಲಿನ ಸಂಪ್ರದಾಯವಾಗಿದೆ. ಶಬರಿಮಲೆಯಲ್ಲು ಸಂಪ್ರದಾಯ ಮುರಿಯುವ ಹುನ್ನಾರದ ವಿರುದ್ದದ ಹೋರಾಟಕ್ಕೆ ಹಿಂದೂ ಸಮಾಜ ಸದಾ ಸಿದ್ದರಿರಬೇಕೆಂದರು. ಕೊಡಗಿನ ಸಂತ್ರಸ್ಥರಿಗೆ ಎಲ್ಲರು ನೆರವು ನೀಡಲೇಬೇಕು, ಇದಕ್ಕೆ ನಮ್ಮ ಸಹಕಾರವು ಇದೆ. ಇದರ ನೆಪದಲ್ಲಿ ಕರ್ನಾಟಕದ ಮೈತ್ರಿ ಸರಕಾರ ದೇವಾಲಯದ ಹುಂಡಿಯಿಂದಲೇ ಲೂಟಿ ಮಾಡಲು ಮುಂದಾಗಿರುವುದನ್ನು ಖಂಡಿಸಿದ ಡಾ.ಭಟ್ ಅವರು, ದೇವಾಲಯದ ಹಣ ದೇವಾಲಯದ ಅಭಿವೃದ್ದಿಗೆ ವಿನಿಯೋಗವಾಗಬೇಕು ಎಂದರು.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ಭಾಗವಹಿಸಿ ಆಶೀರ್ವಚನಗೈದು ಭಜನೆಯಲ್ಲು ಪಾಲ್ಗೊಂಡರು. ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಭಟ್,ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶಾಸಕ ಯು.ರಾಜೇಶ್ ನಾಯ್ಕ್ ,ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಬೆಳಿಗ್ಗೆಯಿಂದ ಸಂಜೆ ಉಪವಾಸ ಮುಕ್ತಾಯದವರೆಗೂ ಸ್ವತ: ಉಪವಾಸದಲ್ಲಿದ್ದು ಭಜನೆಯಲ್ಲಿ ನಿರತರಾಗಿ ಗಮನಸೆಳೆದರು.

ಶಾಸಕ ರಾಜೇಶ್ ನಾಯ್ಕ್, ಹರಿಕೃಷ್ಣ ಬಂಟ್ವಾಳ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ಕರ್ಪೂರಾರತಿ ನಡೆದು, ಉಪಹಾಸ ಸತ್ಯಾಗ್ರಹಕ್ಕೆಮಂಗಳ ಹಾಡಲಾಯಿತು.

See also  ಯೆನೆಪೋಯದಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು