ಸುಳ್ಯ: ಕಣ್ಣ ಮುಂದೆ ಅರಳುವ ಪ್ರಕೃತಿಯ ಅಧಮ್ಯ ಸೌಂದರ್ಯವನ್ನೂ, ಕ್ಷಣ ಕ್ಷಣಕ್ಕೆ ಬದಲಾಗುವ ನಿಸರ್ಗದ ವರ್ಣಗಳನ್ನು ಕ್ಷಣ ಮಾತ್ರದಲ್ಲಿ ಕ್ಯಾನ್‍ವಾಸ್‍ನಲ್ಲಿ ಪಡಮೂಡಿಸುವ ಮೂಲಕ ಕನಕಮಜಲಿನಲ್ಲಿ ನಡೆದ ಚಿತ್ರಕಲಾ ಶಿಬಿರ ಕಲೆಯ ವಿಸ್ಮಯ ಲೋಕವನ್ನು ತೆರೆದಿಟ್ಟಿತು.
ಕನಕಮಜಲು ಯುವಕ ಮಂಡಲದ ನೇತೃತ್ವದಲ್ಲಿ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆ, ಕನಕಮಜಲು ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ಮತ್ತು ಮಂಡ್ಯದ ಗುರುದೇವ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸು-ಯೋಗ ನಿಸರ್ಗ ಚಿತ್ರಕಲಾ ಶಿಬಿರವು ನಿಸರ್ಗದ ಸೊಬಗನ್ನು ತೆರೆದಿಡುವ ಮೂಲಕ ಕಲಾಸ್ವಾದಕರ ಮನ ಗೆದ್ದಿತ್ತು.
ಮಹಾಲಸಾ ಚಿತ್ರ ಕಲಾ ಶಾಲೆಯ ವಿದ್ಯಾರ್ಥಿಗಳ ಕಲಾ ಕೈಚಳಕದ ಮೂಲಕ ಕನಕಮಜಲಿನ, ಕಾಡು, ಪ್ರಕೃತಿ, ನದಿ, ತೊರೆ, ಸೂರ್ಯ, ಮೋಡ, ಮಂಜು, ಮನೆ, ಕೃಷಿ ಬದುಕುಗಳು ಮೋಹಕ ಚಿತ್ರಗಳಾದವು. ಬೆಳಗ್ಗೆ ಆರರಿಂದ ರಾತ್ರಿ ತನಕ ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸುವ ಪ್ರಕೃತಿ, ಸೂರ್ಯ ರಶ್ಮಿಗಳ ಬೆಳಕಿನಾಟ, ಎಲ್ಲೆಲ್ಲೂ ಹಸಿರ ರಾಶಿ ಹೊದ್ದು ಮಲಗಿರುವ ನಿಸರ್ಗ, ಗ್ರಾಮದ ಮನೆಗಳು, ಜನರ ಕೃಷಿ ಬದುಕು, ಸಾಂಪ್ರದಾಯಿಕ ಆಚರಣೆಗಳು, ಆರಾಧನೆಗಳು, ಆರಾಧನಾ ಕೇದ್ರಗಳು ಚಿತ್ರಕಲಾ ಶಿಬಿರದಲ್ಲಿ ಮನಮೋಹಕ ಚಿತ್ರಗಳಾಗಿ ಮೂಡಿ ಬಂದವು. ತಮ್ಮದೇ ಪರಿಸರ, ಮನೆಗಳು ಕ್ಯಾನ್‍ವಾಸ್‍ನಲ್ಲಿ ಚಿತ್ತಾರವಾಗಿರುವುದು ನೋಡಿ ಜನರು ಮೂಕವಿಸ್ಮಿತರಾದರು. ಕನಕಮಜಲಿನ ಪ್ರಕೃತಿಯ ಪ್ರತಿ ಇಂಚು ಇಂಚುಗಳೂ, ಪ್ರಕೃತಿಯ ಹಾವ ಭಾವಗಳು ಒಂದೊಂದು ಕಲಾ ಸೃಷ್ಠಿಗಳಾದವು.
33 ವಿದ್ಯಾರ್ಥಿ ಕಲಾವಿದರು.
ಮಹಾಲಸಾ ಕಾಲೇಜಿನ ಚಿತ್ರ ಕಲಾ ಪ್ರಾಧ್ಯಾಪಕ ಸಯ್ಯದ್ ಆಸಿಫ್ ಅಲಿ ಮತ್ತು ಕಾಲೇಜಿನ 33 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ನೆರೆಯ ಕಾಸರಗೋಡಿನ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಚಿತ್ರಕಲಾ ಶಿಬಿರ ನಿಸರ್ಗವನ್ನು ಹತ್ತಿರದಿಂದ ನೋಡುವ ಮತ್ತು ಅಧ್ಯಯನ ನಡೆಸುವ ಅವಕಾಶವನ್ನು ಒದಗಿಸಿತು. ಇದು ಇವರ ಚಿತ್ರಕಲಾ ಅಧ್ಯಯನದ ಭಾಗವೂ ಹೌದು. ವಿಫುಲ ಅವಕಾಶಗಳ ಆಗರವಾಗಿರುವ ಚಿತ್ರಕಲಾ ವಿಭಾಗದಲ್ಲಿ ಒಂದು ವರ್ಷ ಮೂಲಕಲೆ ಮತ್ತು ಮೂರು ವರ್ಷ ಪದವಿ ಒಟ್ಟು ನಾಲ್ಕು ವರ್ಷ ಅಧ್ಯಯನ ನಡೆಸಬೇಕು. ಚಿತ್ರಕಲಾ ಅಧ್ಯಯನದ ಯಾವುದೇ ವಿಭಾಗದಲ್ಲಾದರೂ ಪ್ರಕೃತಿ ಚಿತ್ರಕಲೆ ಮುಖ್ಯವಾದ ವಿಷಯ. ಆದುದರಿಂದಲೇ ಪ್ರತಿ ವರ್ಷ ಒಂದೊಂದು ಕಡೆಗಳಲ್ಲಿ ಪ್ರಕೃತಿಯ ಮಡಿಲಲ್ಲಿ ಶಿಬಿರ ನಡೆಸಲಾಗುತ್ತದೆ.
ಪ್ರಕೃತಿಯನ್ನು ಉಳಿಸುವ ಸಂದೇಶ:
ಪ್ರಕೃತಿಯನ್ನು ಅರಿಯಬೇಕು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬೇಕು ಆ ಮೂಲಕ ನಿಸರ್ಗವನ್ನು ಉಳಿಸಿ ಎಂಬ ಸಂದೇಶ ಸಾರುವುದೂ ಚಿತ್ರಕಲಾ ಶಿಬಿರದ ಉದ್ದೇಶ. ವೈವಿಧ್ಯಮಯ ಚಿತ್ರಕಲೆಗಳ ರಚನೆಯ ಜೊತೆಗೆ ಸಾಂಸ್ಕೃತಿಕ ವಿನಿಮಯಗಳ ವೇದಿಕೆಯಾಗಿಯೂ ಶಿಬಿರ ಮಾರ್ಪಾಟಾಯಿತು. ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಸುತ್ತಮುತ್ತಲಿನ ಪರಿಸರ ಚಿತ್ರಕಲೆಗಳಾದಾಗ ಪರಿಸರದ ಬಗ್ಗೆ ಕಾಳಜಿ ಹೆಚ್ಚಲು ಮತ್ತು ಚಿತ್ರಕಲೆಯ ಬಗ್ಗೆ ಆಸಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎಂಬುದು ಸಂಘಟಕರ ನಿರೀಕ್ಷೆ. ಅದರಂತೆ ಗ್ರಾಮೀಣ ಜನರ ಜೀವನ, ಕೃಷಿ, ಸಾಂಸ್ಕೃತಿಕ ಬದುಕು, ಆಚಾರ, ವಿಚಾರಗಳ ಬಗ್ಗೆ ತಿಳಿಯಲು ಮತ್ತು ಅದನ್ನು ಚಿತ್ರಗಳಾಗಿಸಲು ವಿದ್ಯಾರ್ಥಿಗಳಿಗೂ ಸಹಾಯಕವಾಯಿತು.
ಚಿತ್ರಗಳು ಮನೆ ಮನೆಗಳಲ್ಲಿ ಬೆಳಗಲಿದೆ
ಶಿಬಿರದಲ್ಲಿ ವಿದ್ಯಾರ್ಥಿಗಳು ರಚಿಸಿದ ಚಿತ್ರಗಳಲ್ಲಿ ಆಯ್ದವುಗಳನ್ನು ಕನಕಮಜಲಿನ ಜನರಿಗೆ ನೀಡಿ ಮನೆ ಮನೆಗಳಲ್ಲಿ ಪ್ರದರ್ಶಿಸಲಾಗುವುದು. ಅಲ್ಲದೆ ಶಿಬಿರದ ಕೇಂದ್ರವಾದ ಮೂರ್ಜೆ ಶ್ರೀ ಬಾಲ ನಿಲಯದ ಗೋಡೆಯಲ್ಲಿ ಶಿಬಿರದ ನೆನಪಿಗಾಗಿ ಸಂಪ್ರದಾಯಿಕ ರೇಖಾ ಚಿತ್ರವೊಂದು ಬೆಳಗಲಿದೆ. ಪ್ರಕೃತಿಯ ತೊಟ್ಟಿಲಿನಲ್ಲಿರುವ ಕಲೆಗಳಂಕಣವಾದ ಕನಕಮಜಲಿನಲ್ಲಿ ನಡೆಯುತ್ತಿರುವ ಮೂರನೆಯ ಕಲಾ ಶಿಬಿರ ಇದಾಗಿದೆ. ಕನಕಮಜಲು ಯುವಕ ಮಂಡಲದ ನೇತೃತ್ವದಲ್ಲಿ 2009ರಲ್ಲಿ ಮತ್ತು 2015ರಲ್ಲಿ ಕಲಾಶಿಬಿರಗಳು ನಡೆದಿತ್ತು. 2009ರಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಗೋಡೆಗಳ ಮೇಲೆ ಚಿತ್ರಗಳನ್ನು ಪಡಮೂಡಿಸಿದ್ದರು. 2015ರಲ್ಲಿ ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಅರೆಭಾಷಾ ಸಾಂಸ್ಕೃತಿಕ ಬದುಕು ಚಿತ್ರಕಲೆಗಳಾಗಿ ಅನಾವರಣಗೊಂಡಿತು.