News Kannada
Sunday, September 25 2022

ಕರಾವಳಿ

ವರ್ಷಪೂರ್ತಿ ಆದಾಯದ ಮೂಲವಾದ ಅಡಕೆ ತೋಟದಲ್ಲಿನ ತರಕಾರಿ ಕೃಷಿ - 1 min read

Photo Credit :

ವರ್ಷಪೂರ್ತಿ ಆದಾಯದ ಮೂಲವಾದ ಅಡಕೆ ತೋಟದಲ್ಲಿನ ತರಕಾರಿ ಕೃಷಿ

ಸುಳ್ಯ: ಮಳೆಗಾಲದಲ್ಲಿ ಮನೆಯ ಅಂಗಳದಲ್ಲಿ ಮತ್ತು ಎಲ್ಲೆಲ್ಲ ಸ್ಥಳಾವಕಾಶಗಳು ಇವೆಯೋ ಅಲ್ಲೆಲ್ಲ ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ತರಕಾರಿ ಬೆಳೆಯುತ್ತಾರೆ. ಆದರೆ ಬೇಸಿಗೆ ಬಂದರೆ ಇಲ್ಲೆಲ್ಲ ಬಿಸಿಲಿನ ಬೇಗೆ ಹೆಚ್ಚುತ್ತದೆ ಮತ್ತು ನೀರಿನ ಅಭಾವ ಎದುರಾಗುತ್ತದೆ.

ಆದುದರಿಂದಲೇ ಮಳೆಗಾಲದ ಕೆಲವು ತಿಂಗಳುಗಳ ಕಾಲ ಮಾತ್ರ ಕೃಷಿಕರು ತರಕಾರಿ ಬೆಳೆಯುತ್ತಾರೆ. ಬೇಸಿಗೆ ಬಂದೊಡನೆ ತರಕಾರಿ ಕೃಷಿಗೆ ಬ್ರೇಕ್ ನೀಡಲಾಗುತ್ತದೆ. ಆದರೆ ಅಡಕೆ ತೋಟದಲ್ಲಿ ತರಕಾರಿ ಕೃಷಿ ಮಾಡಿ ವರ್ಷ ಪೂರ್ತಿ ನಿರಂತರ ಆದಾಯ ಪಡೆಯುವ ಪ್ರಯೋಗವನ್ನು ಮಾಡಿದ್ದಾರೆ ಕನಕಮಜಲಿನ ಕೃಷಿಕ ದಿನೇಶ್ ಮಠ. ಮಳೆಗಾಲದಲ್ಲಿ ತನ್ನ ಮನೆಯ ಅಂಗಳದಲ್ಲಿ, ಅಡಕೆ ತೋಟದಲ್ಲಿ ಮತ್ತು ಸ್ಥಳ ಸಿಕ್ಕಿದಲ್ಲೆಲ್ಲ ತರಕಾರಿ ಕೃಷಿ ಮಾಡಿ ಉತ್ತಮ ಫಸಲು ಮತ್ತು ಆದಾಯ ಪಡೆಯುವ ದಿನೇಶ್ ಮಳೆ ಕಡಿಮೆಯಾಗುತ್ತಿದ್ದಂತೆ ತರಕಾರಿ ಕೃಷಿಯನ್ನು ಪೂರ್ತಿಯಾಗಿ ಅಡಕೆ ತೋಟಕ್ಕೆ ಸ್ಥಳಾಂತರಿಸುತ್ತಾರೆ.

ನಿರಂತರ ನೀರಿನ ಲಭ್ಯತೆ ಮತ್ತು ತಂಪಾದ ವಾತಾವರಣ ಅಡಕೆ ತೋಟದಲ್ಲಿ ತರಕಾರಿ ಬೆಳೆ ಮಾಡಲು ಸಹಾಯಕವಾಗುತ್ತದೆ. ಒಂದು ಬುಡದಲ್ಲಿ ಮೂರು ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತದೆ. ಬೆಂಡೆಕಾಯಿ, ಮೆಣಸು, ಹರಿವೆ ಒಂದೇ ಬುಡದಲ್ಲಿ ನೆಡಲಾಗುತ್ತದೆ. ಅಲ್ಲದೆ ಬದನೆ, ಮೆಣಸು, ಮೂಲಂಗಿ ಹೀಗೆ ಬೇರೆ ಬೇರೆ ರೀತಿಯ ತರಕಾರಿಗಳನ್ನು ಒಂದೇ ಬುಡದಲ್ಲಿ ಬೆಳೆಸುತ್ತಾರೆ. ತೋಟದ ಮಧ್ಯೆ ಅಲ್ಲಲ್ಲಿ ಬದಿಯಲ್ಲಿ ಹೀಗೆ ಇರುವ ಸ್ಥಳದಲ್ಲಿ ಅಲ್ಲಲ್ಲಿ ಹತ್ತಾರು ತರಕಾರಿ ಗಿಡಗಳನ್ನು ಬೆಳೆಯಲಾಗುತಿದೆ. ಬೆಂಡೆಕಾಯಿ, ಬದನೆ, ವಿವಿಧ ತಳಿಯ ಅಲಸಂಡೆ, ಬಸಲೆ, ನೆಲ ಬಸಲೆ, ಬೀನ್ಸ್, ತೊಂಡೆಕಾಯಿ, ಸೌತೆ ಕಾಯಿ, ಮೂಲಂಗಿ, ಸೊರೆ ಕಾಯಿ, ಪಟ್ಲಕಾಯಿ, ಹೀರೆ ಕಾಯಿ, ಮುಂಡಿ, ಕೇನೆ, ಕರಿ ಚೇವು ಹೀಗೆ ವಿವಿಧ ಬಗೆಯ ತರಕಾರಿಗಳನ್ನು ತೋಟದಲ್ಲಿ ಬೆಳೆದು ಹಸಿರು ಲೋಕವನ್ನು ಸೃಜಿಸಿದ್ದಾರೆ. ಸುಮಾರು ಮುನ್ನೂರಕ್ಕೂ ಹೆಚ್ಚು ಬುಡ ತರಕಾರಿಗಳನ್ನು ನೆಟ್ಟು ಬೆಳೆಸಿದ್ದಾರೆ.

ಮೂರು ವರ್ಷಗಳಿಂದ ತೋಟದಲ್ಲಿ ತರಕಾರಿ ಕೃಷಿ:

ಕಳೆದ ಮೂರು ವರ್ಷಗಳಿಂದ ಈ ರೀತಿಯ ಪ್ರಯೋಗದ ಮೂಲಕ ವರ್ಷ ಪೂರ್ತಿ ತರಕಾರಿ ಬೆಳೆಯುತ್ತಾರೆ ದಿನೇಶ್ ಮಠ. ಮಳೆಗಾಲದಲ್ಲಿ ಮನೆಯ ಅಂಗಳದಲ್ಲಿ ಮತ್ತು ಅಂಗಳದ ಸಮೀಪದಲ್ಲಿ ಬೆಂಡೆಕಾಯಿ, ವಿವಿಧ ಬಗೆಯ ಅಲಸಂಡೆ ಹೀರೆ ಕಾಯಿ ಮತ್ತಿತರ ಕೃಷಿಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ನವೆಂಬರ್ ವರೆಗೆ ಮಳೆಗಾಲದಲ್ಲಿ ತರಕಾರಿ ಕೃಷಿ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಅಂಗಳದಿಂದ ತೆರವು ಮಾಡಲಾಗುತ್ತದೆ. ಅಡಕೆ ಒಣಗಿಸಲು ಮತ್ತಿತರ ಅಗತ್ಯತೆಗಳಿಗೆ ಅಂಗಳವನ್ನು ಹದ ಮಾಡಬೇಕಾಗುತ್ತದೆ. ಅಡಕೆ ತೋಟದಲ್ಲಿ ನೆಡುವ ತರಕಾರಿಯ ಗಿಡಗಳಿಗೆ ಹನಿ ನೀರಾವರಿ ಮಾದರಿಯ ಸ್ಪ್ರಿಂಕ್ಲರ್ ಅಳವಡಿಸುತ್ತಾರೆ. ತರಕಾರಿ ಗಿಡಗಳಿಗೆ ಸೆಗಣಿಯ ಸ್ಲರಿ ಗೊಬ್ಬರವನ್ನೂ ಒದಗಿಸಿ ಪೂರ್ತಿಯಾಗಿ ಸಾವಯವ ಕೃಷಿಯನ್ನೇ ನೆಚ್ಚಿ ಕೊಂಡಿದ್ದಾರೆ ದಿನೇಶ್.

 

ವರ್ಷಪೂರ್ತಿ ಆದಾಯದ ಮೂಲ:

ಕೃಷಿ ಮತ್ತಿತರ ಕೆಲಸದ ನಡುವೆ ಸಿಗುವ ಬಿಡುವಿನ ಸಮಯವನ್ನು ತರಕಾರಿ ಕೃಷಿ ಮಾಡಲು ವಿನಿಯೋಗಿಸುವ ದಿನೇಶ್‍ಗೆ ಕಳೆದ ಮೂರು ವರ್ಷಗಳಿಂದ ತರಕಾರಿ ಕೃಷಿ ಉತ್ತಮ ಆದಾಯವನ್ನೂ ಕೊಡುತಿದೆ. ಗಿಡ ನೆಟ್ಟು ನೀರು, ಗೊಬ್ಬರ ಎರೆದು ಬೆಳೆಸಿ ತರಕಾರಿಯನ್ನು ಕೊಯ್ಲು ಮಾಡಿ ಸುಳ್ಯ ಪೇಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಸಾವಯವ ಮತ್ತು ಸ್ವಾದೀಷ್ಟವಾದ ಇವರ ತರಕಾರಿಗೆ ಸಾಕಷ್ಟು ಬೇಡಿಕೆಯೂ ಇದೆ. ಸಾಕಷ್ಟು ಮಂದಿ ಜನರು ಇವರಿಂದ ನೇರವಾಗಿ ತರಕಾರಿ ಖರೀದಿಸುತ್ತಾರೆ. ಅಲ್ಲದೆ ನಗರದ ತರಕಾರಿ ಅಂಗಡಿಗಳಿಗೂ ಇವರು ತರಕಾರಿಯನ್ನು ಸರಬರಾಜು ಮಾಡುತ್ತಾರೆ.

See also  ವಿದ್ಯುತ್ ತಂತಿಯನ್ನು ಕಳವು ಮಾಡಿ ಗುಜಿರಿಗೆ ಮಾರಾಟ: ಆರೋಪಿ ಬಂಧನ

 

“ವರ್ಷಪೂರ್ತಿ ತರಕಾರಿ ಬೆಳೆಯುವ ಕಾರಣ ಉತ್ತಮ ಫಸಲು ಮತ್ತು ಆದಾಯ ಬರುತ್ತದೆ. ಕಳೆದ ಮೂರು ವರ್ಷಗಳಿಂದ ಅಡಕೆ ತೋಟದಲ್ಲಿಯೂ ತರಕಾರಿ ಕೃಷಿ ಮಾಡುವ ಕಾರಣ ಮಳೆಗಾಲ, ಬೇಸಿಗೆ ಎಂಬ ವ್ಯತ್ಯಾಸವಿಲ್ಲದೆ ಯಾವಾಗಲೂ ತರಕಾರಿ ಫಸಲು ದೊರಕುತ್ತದೆ”

-ದಿನೇಶ್ ಮಠ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು