ಪುತ್ತೂರು: ಓಮ್ನಿ ಕಾರೊಂದಕ್ಕೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಓಮ್ನಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಹಾಗೂ ಓಮ್ನಿ ಚಾಲಕ ಗಂಭೀರ ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ನರಿಮೊಗ್ರು ಗ್ರಾಮದ ಮುಕ್ವೆ ಮಸೀದಿ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಹೋಳಿಗೆ ತಯಾರಿಸಿ ವ್ಯಾಪಾರ ಮಾಡುವ ಕಾಯಕ ನಡೆಸುತ್ತಿದ್ದ ಪುತ್ತೂರು ತಾಲ್ಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಸಿದ್ದನಗುರಿ ನಿವಾಸಿ ಕೃಷ್ಣ ಭಟ್ (58) ಮೃತಪಟ್ಟವರು.
ಹೋಳಿಗೆ ತಯಾರಿಸಿ ಪುತ್ತೂರಿನ ವಿವಿಧ ಬೇಕರಿಗಳಿಗೆ ವಿತರಣೆ ಮಾಡುವ ಕಾಯಕ ನಡೆಸುತ್ತಿದ್ದ ಕೃಷ್ಣ ಭಟ್ ಅವರು ಎಂದಿನಂತೆ ಮಂಗಳವಾರ ಬೆಳಿಗ್ಗೆ ಹೋಳಿಗೆ ಮಾರಾಟ ಮಾಡುವ ಸಲುವಾಗಿ ತನ್ನ ಪುತ್ರ ಅವಿನಾಶ್ ಅವರ ಜತೆ ಓಮ್ನಿಯಲ್ಲಿ ಪುತ್ತೂರು ಕಡೆಗೆ ಬರುತ್ತಿದ್ದ ವೇಳೆ ಮುಕ್ವೆ ಮಸೀದಿ ಬಳಿ ಪುತ್ತೂರು ಕಡೆಯಿಂದ ಪುರುಷರಕಟ್ಟೆ ಕಡೆಗೆ ಹೊನ್ನಪ್ಪ ಗೌಡ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಓಮ್ನಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಓಮ್ನಿಯಲ್ಲಿ ಕೃಷ್ಣಭಟ್ ಹಾಗೂ ಚಾಲಕ ಅವಿನಾಶ್ ಅವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಬೀಟ್ ಪೊಲೀಸ್ ಹರೀಶ್ ಮತ್ತು ಸ್ಥಳೀಯರು ಸೇರಿಕೊಂಡು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಿದ್ದರು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಕೃಷ್ಣಭಟ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಗಂಭೀರ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದ ಅವಿನಾಶ್ ಅವರನ್ನು ಹೆಚ್ಚಿನ ಚಿಕಿತ್ಸೆಯ ಹಿನ್ನಲೆಯಲ್ಲಿ ಮಂಗಳೂರಿನ ಎ.ಜೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪಿಕಪ್ ವಾಹನ ಚಾಲಕ, ನರಿಮೊಗ್ರುವಿನ ಹೊನ್ನಪ್ಪ ಗೌಡ ಅವರನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪಿಕಪ್ ವಾಹನ ಚಾಲಕ ಹೊನ್ನಪ್ಪ ಗೌಡ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
ಆರೋಪಿ ಚಾಲಕ ಮೂರ್ಚೆ ರೋಗಿ…..?
ಕೃಷ್ಣ ಭಟ್ ಅವರ ಜೀವವನ್ನು ಬಲಿ ತೆಗೆದುಕೊಂಡ ಪಿಕಪ್ ವಾಹನದ ಚಾಲಕ ಹೊನ್ನಪ್ಪ ಗೌಡ ಅವರು ಮೂರ್ಚೆ ರೋಗಿ ಎಂದು ಸಾರ್ವಜನಿಕ ವಲಯದಲ್ಲಿ ಪ್ರಚಾರವಿದೆ. ಈ ಹಿಂದೆಯೂ ಅವರು ಪಿಕಪ್ ವಾಹನ ಚಲಾಯಿಸಿಕೊಂಡು ಹೋಗಿ ಪುರುಷರಕಟ್ಟೆ ಬಳಿ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಆ ಘಟನೆಯಲ್ಲಿ ಅಪಾಯದಿಂದ ಪಾರಾಗಿದ್ದರು ಎಂಬ ಮಾಹಿತಿ ಇದೆ.