ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊಮ್ಮಕ್ಕಳಾದ ನಿಖಿಲ್ ದೇವೇಗೌಡ ಹಾಗೂ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುವ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ನೀಡಿದ್ದಾರೆ.
ಭಾನುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಗೌಡ ಅವರು ರಾಜಕೀಯಕ್ಕೆ ಬರುವ ಬಗ್ಗೆ ಚಿಂತಿಸಿರಲಿಲ್ಲ. ಆದರೆ ಮಂಡ್ಯ ಹಾಗೂ ಹಾಸನದ ಜನತೆ ಅವರು ರಾಜಕೀಯಕ್ಕೆ ಪ್ರವೇಶ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಜನರ ಬೇಡಿಕೆ, ನಾನು ಇದಕ್ಕೆ ವಿರೋಧಿಸುವುದಿಲ್ಲ ಎಂದರು.
ಸುಮಲತಾ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳೂ ಮೊದಲಿನಿಂದಲೂ ಜೆಡಿಎಸ್ ಪಕ್ಷದ ಹಿಡಿತದಲ್ಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್28 ಸೀಟುಗಳಲ್ಲಿ 12 ಸೀಟುಗಳ ಆಕಾಂಕ್ಷಿಯಾಗಿದೆ. ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.